ಬೆಂಗಳೂರು: ಜಾತಿ ಗಣತಿ (Caste Census) ವರದಿಯು ಸಿದ್ದರಾಮಯ್ಯ (Siddaramaiah) ಅವರಿಂದ ಸಿದ್ದರಾಮಯ್ಯ ಅವರಿಗಾಗಿ ಸಿದ್ದರಾಮಯ್ಯನವರೇ ಮಾಡಿಕೊಂಡ ವರದಿ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಲೇವಡಿ ಮಾಡಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸೋರಿಕೆ ಆಗಿರುವ ಈ ವರದಿಯಲ್ಲಿ ಇವೆ ಎನ್ನಲಾದ ಅಂಕಿ ಅಂಶಗಳನ್ನು ಒಮ್ಮೆ ನೋಡಿದರೆ ಈ ವರದಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಕ್ಷೇಮಕ್ಕಾಗಿ ತಯಾರು ಮಾಡಿಸಿಕೊಂಡಿರುವ ವರದಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಜಾತಿ ಗಣತಿ ದಂಗಲ್ – ಒಕ್ಕಲಿಗ ಶಾಸಕರ ಸಭೆ ಕರೆದ ಡಿಸಿಎಂ
ನಮ್ಮ ರಾಜ್ಯದಲ್ಲಿ ಏಳು ಕೋಟಿ ಕನ್ನಡಿಗರು ಇದ್ದಾರೆ. ಸಮೀಕ್ಷೆ ನಡೆಸಿದವರು ಎಷ್ಟು ಮನೆಗಳಿಗೆ ಹೋಗಿದ್ದಾರೆ ಎಂಬ ದಾಖಲೆಗಳು ಇರಬೇಕು. ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳು ಆಗಿರುವ ನಮ್ಮ ತಂದೆಯ ಮನೆಗೆ ಯಾರೂ ಬಂದು ಸಮೀಕ್ಷೆ ಮಾಡಿಲ್ಲ. ಅದೇ ರೀತಿ ನಮ್ಮ ಅಜ್ಜ, ಈ ದೇಶದ ಮಾಜಿ ಪ್ರಧಾನಿಗಳು. ಅವರ ಮನೆಗೂ ಯಾರೂ ಭೇಟಿ ಕೊಟ್ಟು ಸಮೀಕ್ಷೆ ಮಾಡಿಲ್ಲ. ಇಂಥ ಅಸಂಖ್ಯಾತ ಉದಾಹರಣೆಗಳನ್ನು ಕೊಡಬಲ್ಲೆ. ನನಗೆ ಗಣತಿ ನಡೆದಿರುವ ಬಗ್ಗೆಯೇ ಅನುಮಾನವಿದೆ. ಗಣತಿ ವೈಜ್ಞಾನಿಕವಾಗಿ, ಪ್ರತಿಯೊಂದು ಕುಟುಂಬದ ಮನೆ ಬಾಗಿಲಿಗೆ ಹೋಗಿ ಮಾಡಬೇಕಿತ್ತು. ಆ ರೀತಿ ಆಗಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆರೋಪಿಸಿದರು. ಇದನ್ನೂ ಓದಿ: ಇದು ಜಾತ್ಯಾತೀತ ರಾಷ್ಟ್ರ, ಜಾತಿಗಣತಿಗೆ ಯಾವುದೇ ಮಹತ್ವ ಇಲ್ಲ: ಡಾ.ಮಂಜುನಾಥ್
ಇದು ಸರ್ಕಾರದ ಕಡೆಯಿಂದಲೇ ಸೋರಿಕೆ ಆಗಿರುವ ಅನಧಿಕೃತ ಅಂಕಿ ಅಂಶಗಳು ಎನ್ನುವುದು ನನ್ನ ಅಭಿಪ್ರಾಯ. ಸಾರ್ವಜನಿಕ ವಲಯದಲ್ಲಿ ಯಾವ ರೀತಿ ಚರ್ಚೆ ಬರಬಹುದೆಂದು ನೋಡೋಣ ಎಂದು ಸಿದ್ದರಾಮಯ್ಯ ಅವರು ಟೆಸ್ಟ್ ರನ್ ಮಾಡುತ್ತಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಕಿಡಿಕಾರಿದರು.