– ಈ ರೀತಿ ಸಮೀಕ್ಷೆ ಮಾಡೋದಕ್ಕೆ ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ: ಅರ್ಜಿದಾರರ ಪರ ವಕೀಲರ ವಾದ
– ಅಂಕಿಅಂಶಗಳಿಲ್ಲದೇ ಕಲ್ಯಾಣಕಾರಿ ಯೋಜನೆ ರೂಪಿಸಲು ಆಗಲ್ಲ: ಸರ್ಕಾರ ಪರ ವಕೀಲರು
ಬೆಂಗಳೂರು: ಜಾತಿಗಣತಿ ಸಮೀಕ್ಷೆ (Caste Census) ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ (High COurt) ಬುಧವಾರಕ್ಕೆ ಮುಂದೂಡಿದೆ.
ಇಂದು ಹೈಕೋರ್ಟ್ನ ವಿಭಾಗೀಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಸರ್ಕಾರದ ಪರ ವಕೀಲರಾದ ಶಶಿಕಿರಣ್ ಶೆಟ್ಟಿ ಮತ್ತು ಅಭಿಷೇಕ್ ಮನುಸಿಂಘ್ವಿ ಹಾಗೂ ಅರ್ಜಿದಾರರ ಪರ ಪ್ರಭುಲಿಂಗ ನಾವದಗಿ, ಅಶೋಕ್ ಹಾರನಹಳ್ಳಿ, ಶ್ರೀರಂಗ, ವಿವೇಕ್ ರೆಡ್ಡಿ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಪ್ರಭುಲಿಂಗ ನಾವದಗಿ ಅವರು ಸರ್ಕಾರದ ಆದೇಶದ ಪ್ರತಿ ಉಲ್ಲೇಖಿಸಿ ವಾದ ಮಂಡನೆ ಮಾಡಿದರು. ಹಿಂದುಳಿದ ವರ್ಗಗಳ ಆಯೋಗಕ್ಕೆ ಸಮೀಕ್ಷೆ ಮಾಡಲು ಸೂಚಿಸಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಂಶಗಳ ಮೇಲೆ ಸಮೀಕ್ಷೆ ಮಾಡಲು ಹೇಳಿದೆ. ರಾಜ್ಯದ ಎಲ್ಲಾ ಜನತೆಯನ್ನು ಸಮೀಕ್ಷೆಯಲ್ಲಿ ಒಳಪಡಿಸಬೇಕು ಅಂತ ಇದೆ. ರಾಜ್ಯದ ಎಲ್ಲಾ ಜನರು ಕೂಡ ಸಮೀಕ್ಷೆಯಲ್ಲಿ ಒಳಡಿಸಬೇಕು ಅಂತ ಆದೇಶ ಪ್ರತಿಯಲ್ಲಿ ಉಲ್ಲೇಖಿಸಿದೆ. ಡಿಜಿಟಲ್ ಆಗಿ ದತ್ತಾಂಶ ಸಂಗ್ರಹ ಮಾಡಬೇಕು ಅಂತಿದೆ. ಆಧಾರ ಕಾರ್ಡ್ ಅನ್ನು ಕಡ್ಡಾಯ ಮಾಡಿದ್ದಾರೆ. ಈ ಸಮೀಕ್ಷೆ ಶಿಕ್ಷಕರು, ಆಶಾ ಕಾರ್ಯಕರ್ತೆಯರ ಬಳಕೆ ಮಾಡಬೇಕು ಅಂತ ಹೇಳಿಕೊಂಡಿದೆ. ಮತ್ತೊಂದು ಆದೇಶ ಪ್ರತಿ, 2025 ಆಗಸ್ಟ್ 22ರಲ್ಲಿ ಇನ್ನೊಂದು ಆದೇಶದಲ್ಲಿ ಉಲ್ಲೇಖ ಮಾಡಿದ್ದಾರೆ. ವಿದ್ಯುತ್ ಸಂಪರ್ಕದ ಮಾಹಿತಿಯನ್ನು ಕೇಳಿದೆ ಎಂದು ಸಮೀಕ್ಷೆ ಮಾಡುತ್ತಾ ಇರುವವರ ಬಳಿ ಇರುವ ಹ್ಯಾಂಡ್ ಬುಕ್‌ನ್ನು ಕೋರ್ಟ್ಗೆ ಪ್ರಭುಲಿಂಗ ಅವರು ನೀಡಿದರು.
ಇದರಲ್ಲಿ ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ನಮೂದಿಸಬೇಕು ಅಂತಿದೆ. ಕಡ್ಡಾಯ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಈ ರೀತಿ ಸಮೀಕ್ಷೆ ಮಾಡೋದಕ್ಕೆ ಅಧಿಕಾರವೇ ಇಲ್ಲ. ಸಂವಿಧಾನದ ಪ್ರಕಾರ ಇದಕ್ಕೆ ಅಧಿಕಾರ ಇಲ್ಲ. ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಹಿಂದುಳಿದ ಬಗ್ಗೆ ರಾಜ್ಯ ಸರ್ಕಾರ ಪತ್ತೆ ಮಾಡೋದಕ್ಕೆ ಅಧಿಕಾರ ಇರೋದಿಲ್ಲ. ಸಂವಿಧಾನಕ್ಕೆ 105ನೇ ತಿದ್ದುಪಡಿ ಮಾಡುವುದಕ್ಕೂ ಮುನ್ನ 342(ಎ)ನಲ್ಲಿ ಏನಿದೆ ಎಂಬುದನ್ನು ಪರಿಶೀಲಿಸಬೇಕು. ಈ ಪ್ರಕಾರ ಮಾಡೋ ಹಾಗೇ ಇಲ್ಲ. ಹಾಗೇನಾದರೂ ಮಾಡೋ ಹಾಗಿದ್ರೆ ಕೇಂದ್ರ ಸರ್ಕಾರ ಮಾಡಬಹುದು. ಮನೆಯ ಮುಖ್ಯಸ್ಥನ ಸಂಪೂರ್ಣ ವಿವರ ಕೇಳಲಾಗಿದೆ. ರಾಜ್ಯ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಸರ್ವೆ ಅಧಿಕಾರವಿಲ್ಲ. ರಾಷ್ಟ್ರಪತಿಗಳು ಮಾತ್ರ ಹಿಂದುಳಿದ ವರ್ಗಗಳ ಅಧಿಸೂಚನೆ ಹೊರಡಿಸಬಹುದು ಎಂದು ವಾದಿಸಿದರು.
ಒಕ್ಕಲಿಗರ ಪರ ವಕೀಲ ಅಶೋಕ್ ಹಾರ್ನಹಳ್ಳಿ ವಾದ ಮಂಡಿಸಿ, ಜನರಲ್ಲಿ ಗೊಂದಲ ಸೃಷ್ಟಿಸುವುದೇ ಈ ರಾಜ್ಯ ಸರ್ಕಾರದ ಉದ್ದೇಶ ಆಗಿದೆ. ಜಾತಿ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡುತ್ತಾ ಇದೆ. ಕೇಂದ್ರ ಸರ್ಕಾರ ಈಗಾಗಲೇ 2027ರ ಮಾ.1ರಿಂದ ಜನಗಣತಿ ನಡೆಸಲಿದೆ. ಜನಗಣತಿಯ ಸಂದರ್ಭದಲ್ಲೇ ಜಾತಿಗಣತಿ ನಡೆಸಲು ನಿರ್ಧರಿಸಿದೆ. ರಾಜ್ಯ ಸರ್ಕಾರಗಳ ಗಣತಿ ಉದ್ದೇಶದ ಬಗ್ಗೆ ಹಲವು ಅನುಮಾನಗಳಿವೆ. ಹೀಗಾಗಿಯೇ ಕೇಂದ್ರ ಸರ್ಕಾರ ದೇಶಾದ್ಯಂತ ಗಣತಿಗೆ ನಿರ್ಧರಿಸಿದೆ. ಈ ಹಿಂದೆ ಮಾಡಿರೋ ಸಮೀಕ್ಷೆ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಹಿಂದಿನ ಸಮೀಕ್ಷೆ ಏನಾಯ್ತು ಗೊತ್ತಿಲ್ಲ. 2015 ರಲ್ಲಿ ರಾಜ್ಯ ಸರ್ಕಾರ ಮಾಡಿದ ಸರ್ವೆ ಪ್ರಶ್ನಿಸಲಾಗಿತ್ತು. 2024 ರಲ್ಲಿ ಸಲ್ಲಿಸಿದ ಸರ್ವೆ ವರದಿಯ ಸ್ಥಿತಿ ಏನಾಗಿದೆ ತಿಳಿದಿಲ್ಲ. ಹಿಂದೆ 150 ಕೋಟಿ ರೂ. ಗಳಲ್ಲಿ ಸರ್ವೆ, ಈಗ ಮತ್ತೆ 420 ಕೋಟಿ ವೆಚ್ಚದಲ್ಲಿ ಸರ್ವೆ. 1,561 ಜಾತಿಗಳನ್ನು ಸರ್ವೆ ಮಾಡಲು ಸರ್ಕಾರ ಮುಂದಾಗಿದೆ. ಹೊಸ ಹೊಸ ಜಾತಿಗಳನ್ನು ಸರ್ಕಾರ ಸೃಷ್ಟಿಸಿದೆ. ಜಾತಿಗಳ ಬಗ್ಗೆ ವಿಶ್ಲೇಷಣೆ ಇಲ್ಲದೇ ಸರ್ಕಾರ ಸರ್ವೆಗೆ ಮುಂದಾಗಿದೆ. ಡಿಜಿಟಲ್ ರೂಪದಲ್ಲಿ ಸಂಗ್ರಹ ಮಾಡುವ ದತ್ತಾಂಶ ಸೋರಿಕೆ ಆಗುವ ಸಾಧ್ಯತೆ ಹೆಚ್ಚಿದೆ. ಸಮೀಕ್ಷೆ ಆದ ಬಳಿಕ ಯಾರ ಬಳಿ ಇರಲಿದೆ ಅನ್ನೋದು ಇನ್ನೂ ಸ್ಪಷ್ಟವಾಗಿ ಗೊತ್ತಿಲ್ಲ. ಕೆಲವೊಂದು ವೈಯಕ್ತಿಕ ವಿಚಾರವನ್ನು ಸಮೀಕ್ಷೆಯಲ್ಲಿ ಕೇಳಲಾಗ್ತಾ ಇದೆ. ಸಂವಿಧಾನದ ಕೇಂದ್ರ ಪಟ್ಟಿಯಲ್ಲಿ ಜನಗಣತಿ ಬರುತ್ತದೆ. ಕೇಂದ್ರ ಸಂಗ್ರಹಿಸಿದ ಅಂಕಿಅಂಶಗಳಿಗೆ ಸೂಕ್ತ ರಕ್ಷಣೆ ಒದಗಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ಇಂತಹ ಯಾವುದೇ ರಕ್ಷಣೆ ಒದಗಿಸಿಲ್ಲ. ಮಾಹಿತಿಯ ಖಾಸಗಿತನದ ಹಕ್ಕನ್ನು ಸುಪ್ರೀಂ ಕೋರ್ಟ್ ಗುರುತಿಸಿದೆ. ಡಿಜಿಟಲ್ ಮಾಹಿತಿ ಸೋರಿಕೆಯಾಗುವ ಸಾಧ್ಯತೆಯಿದೆ ಎಂದು ಕೆ.ಎಸ್.ಪುಟ್ಟಸ್ವಾಮಿ ಪ್ರಕರಣದ ತೀರ್ಪು ಉಲ್ಲೇಖಿಸಿ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದರು.
ಸರ್ಕಾರದ ಪರವಾಗಿ ಅಭಿಷೇಕ್ ಮನುಸಿಂಘ್ವಿ ವಾದ ಮಂಡನೆ ಮಾಡಿದರು. ಇದು ಗಣತಿ ಅಲ್ಲ, ಇದೊಂದು ಸಮೀಕ್ಷೆ ಅಷ್ಟೇ. ಎಂದು ವಾದಿಸಿದರು. ಎರಡಕ್ಕೂ ಏನ್ ವ್ಯತ್ಯಾಸವಿದೆ? ಎರಡು ಒಂದೇ ಅಲಾ ಎಂದು ಸಿಜೆ ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಮನುಸಿಂಘ್ವಿ, ಅರ್ಜಿದಾರರು ಜಾತಿ ಸಮೀಕ್ಷೆ ಎಂದು ಬಿಂಬಿಸುತ್ತಿದ್ದಾರೆ. ಆದರೆ, ಇದು ಸಾಮಾಜಿಕ-ಆರ್ಥಿಕ ಸಮೀಕ್ಷೆ ಮಾತ್ರ. ರಾಜ್ಯ ಸರ್ಕಾರಕ್ಕೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದವರ ಸಮೀಕ್ಷೆ ಮಾಡುವ ಅಧಿಕಾರ ಸಂವಿಧಾನವೇ ಕಲ್ಪಿಸಿದೆ. ಇದು ಕೇವಲ ದತ್ತಾಂಶ ಸಂಗ್ರಹದ ವಿಚಾರ ಆಗಿದೆ. ಕರ್ನಾಟಕ ಸರ್ಕಾರ ಈಗಾಗಲೇ ನಾಲ್ಕು ಬಾರಿ ಈ ರೀತಿಯ ಸಮೀಕ್ಷೆಗಳನ್ನು ಮಾಡಿಸಿದೆ. ತಡೆಯಾಜ್ಞೆ ನೀಡಿದರೆ ದೂರಗಾಮಿ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ, ಇದಕ್ಕೆ ತಡೆಯಾಜ್ಞೆ ನೀಡಬಾರದು ಎಂದು ಕೋರ್ಟ್ನಲ್ಲಿ ಮನವಿ ಮಾಡಿದರು.
ಸರ್ಕಾರದ ನೀತಿ ನಿರೂಪಣೆಗೆ ಪೂರಕವಾಗಿ ಸರ್ವೆ ಮಾಡಲಾಗುತ್ತಿದೆ. ಸಾಮಾಜಿಕ ಕಲ್ಯಾಣ ಕಾರ್ಯಗಳಿಗೆ ಪೂರಕವಾಗಿ ಸರ್ವೆ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಅಧಿಕಾರವಿದ್ದಾಗ ಹೇಗೆ ಮಾಡಬೇಕೆಂಬುದು ಮುಖ್ಯವಲ್ಲ. ಅಂಕಿ ಅಂಶ ಸಂಗ್ರಹಿಸಿ ಸರ್ಕಾರ ಯೋಜನೆಗಳನ್ನು ರೂಪಿಸುತ್ತದೆ. ಅಂಕಿ ಅಂಶಗಳಿಲ್ಲದೇ ಕಲ್ಯಾಣಕಾರಿ ಯೋಜನೆಗಳನ್ನೂ ರೂಪಿಸಲಾಗುವುದಿಲ್ಲ. ತಡೆ ನೀಡಿದರೆ ಸರ್ಕಾರದ ಅಧಿಕಾರವನ್ನೂ ತಡೆದಂತಾಗುತ್ತದೆ. ಈ ಹಿಂದೆಯೂ 2 ಆಯೋಗಗಳನ್ನು ರಚಿಸಲಾಗಿತ್ತು. ಹಾವನೂರು ಆಯೋಗ, ವೆಂಕಟಸ್ವಾಮಿ ಆಯೋಗ ರಚಿಸಲಾಗಿತ್ತು. ಸರ್ವೆ ಎಂದರೆ ಸಂಪೂರ್ಣ ಜನರನ್ನು ಒಳಗೊಳ್ಳುತ್ತದೆ. ಸರ್ಕಾರ ಆಯ್ದು ಆಯ್ದು ಸರ್ವೆ ನಡೆಸಲಾಗುವುದಿಲ್ಲ. ಹಿಂದುಳಿದ ವರ್ಗಗಗಳನ್ನು ಪತ್ತೆ ಹಚ್ಚಲು ಸಂಪೂರ್ಣ ಸರ್ವೆ ಅಗತ್ಯ. ಇಂದಿರಾ ಸಹಾನಿ ಪ್ರಕರಣ ಉಲ್ಲೇಖಿಸಿ ಸಿಂಘ್ವಿ ವಾದ
ಅಂಕಿ ಅಂಶ ಸಂಗ್ರಹಿಸಿದೇ ಹಿಂದುಳಿದ ವರ್ಗ ಪತ್ತೆ ಹಚ್ಚುವುದು ಹೇಗೆ ಎಂದು ಪ್ರಶ್ನಿಸಿದರು.
ಸಂವಿಧಾನಕ್ಕೆ 105 ನೇ ತಿದ್ದುಪಡಿ ಬಳಿಕ ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಸಂಪೂರ್ಣ ಜನರ ಜಾತಿ ಸರ್ವೆ ನೀತಿ ನಿರೂಪಣೆಯ ಭಾಗವಾಗಿದೆ. ದಂತ ಗೋಪುರದಲ್ಲಿ ಕುಳಿತು ಜಾತಿಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪಟ್ಟಿ ತಯಾರಿಸಲು ಅವಕಾಶವಿದೆ. ಅಂಕಿ ಅಂಶ ಸಂಗ್ರಹಿಸದೇ ಪಟ್ಟಿ ತಯಾರಿಸುವುದು ಹೇಗೆ? ಕೇಂದ್ರ ಸರ್ಕಾರ ಮಾಡುತ್ತದೆ, ರಾಜ್ಯ ಮಾಡುವಂತಿಲ್ಲ ಎನ್ನುವಂತಿಲ್ಲ. ಕೇಂದ್ರದ ಜಾತಿ ಪಟ್ಟಿಯಲ್ಲಿರುವುದಕ್ಕಿಂತ ಪ್ರತ್ಯೇಕ ಪಟ್ಟಿ ಹೊಂದಬಹುದು. ಕೇಂದ್ರ ಸರ್ಕಾರವೇ ಸಂವಿಧಾನಕ್ಕೆ 105 ನೇ ತಿದ್ದುಪಡಿ ತಂದಿದೆ. ಆದರೆ, ಇಲ್ಲಿ ಅರ್ಜಿದಾರರಿಗೆ ಕೇಂದ್ರ ಸರ್ಕಾರ ಬೆಂಬಲಿಸುತ್ತಿದೆ. ರಾಜ್ಯ ಸರ್ಕಾರಕ್ಕೆ ಅಧಿಕಾರವಿರುವುದರಿಂದ ತಡೆ ನೀಡಬಾರದು. ಯಾವಾಗ ಮಾಡಬೇಕೆಂಬುದು ಸರ್ಕಾರದ ವಿವೇಚನೆಗೆ ಬಿಟ್ಟದ್ದು. ಬಿಹಾರದಲ್ಲಿ ಕೂಡಾ ಜಾತಿಗಣತಿ ಮಾಡಲಾಗಿದೆ. ಕೇಂದ್ರ ಸರ್ಕಾರದ ಜಾತಿಗಣತಿಗೆ ಕಾಯಬೇಕೆಂದಿಲ್ಲ. ಹಾಗಾದರೆ, ರಾಜ್ಯದ ಆಡಳಿತ ದುರ್ಬಲವಾಗುತ್ತದೆ. ಅಂಕಿ ಅಂಶ ಸಂಗ್ರಹಿಸಿ ಅರ್ಹ ಜಾತಿಗಳಿಗೆ ಸವಲತ್ತು ನೀಡಬಹುದು. ಹಳೆಯ ಸಮೀಕ್ಷೆಗೆ ಈಗ ಅಪ್‌ಡೇಟ್ ಮಾಡುತ್ತಿದ್ದೀವಿ ಅಷ್ಟೇ ಎಂದು ಸಿಂಘ್ವಿ ವಾದಿಸಿದರು.
ಹಿಂದುಳಿದ ಆಯೋಗದ ಪರ ರವಿವರ್ಮಕುಮಾರ್ ವಾದ ಮಂಡಿಸಿ, ನಾವು ಆಧಾರ್ ಕಾರ್ಡ್ ಪಡೆಯುತ್ತಿರೋದು ಕೆವೈಸಿ ವಿಚಾರಕ್ಕಾಗಿ. ವ್ಯಕ್ತಿ ಸ್ಪಷ್ಟೀಕರಣಕ್ಕಾಗಿ ಅಷ್ಟೇ. ನಾಳೆಗೆ ವಿಚಾರಣೆ ಮುಂದೂಡಲು ಮನವಿ ಮಾಡಿದರು. ಕೊನೆಗೆ ಹೈಕೋರ್ಟ್ ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿತು.