ನವದೆಹಲಿ: ಹೊಸ ವರ್ಷ ಸ್ವಾಗತಿಸುವ ಹೊತ್ತಿನಲ್ಲೇ ಜಾರಿ ನಿರ್ದೇಶನಾಲಯ (Enforcement Directorate) ಅಧಿಕಾರಿಗಳ ತಂಡ ಭರ್ಜರಿ ಬೇಟೆಯಾಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಸರ್ವಪ್ರಿಯ ಪ್ರದೇಶದಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳ ತಂಡ ಸುಮಾರು 14 ಕೋಟಿ ಮೌಲ್ಯದ ನಗದು, ಆಭರಣಗಳನ್ನ ಜಪ್ತಿ ಮಾಡಿದೆ.
ಬರೋಬ್ಬರಿ 5.12 ಕೋಟಿ ರೂ. ನಗದು, 8.80 ಕೋಟಿ ರೂ. ಮೌಲ್ಯದ ಚಿನ್ನ (Gold) ಹಾಗೂ ವಜ್ರಾಭರಣ (Diamonds) ತುಂಬಿದ್ದ ಸೂಟ್‌ಕೇಸ್ ಮತ್ತು 35 ಕೋಟಿ ರೂ. ಆಸ್ತಿಗೆ ಸಂಬಂಧಿಸಿದ ಚೆಕ್ ಬುಕ್, ಇತರ ದಾಖಲೆಗಳನ್ನ ವಶಪಡಿಸಿಕೊಂಡಿದೆ. ಇದನ್ನೂ ಓದಿ: ಗೋವಾದಲ್ಲಿ ಬಿಯರ್ ಬಾಟಲ್ ಹಿಡ್ಕೊಂಡು ಸುತ್ತಾಡಿದ ಸಚಿನ್ ಪುತ್ರಿ

ತಲೆಮರೆಸಿಕೊಂಡಿರುವ ಹರಿಯಾಣ ಮೂಲದ ರಾವ್ ಇಂದರ್ಜಿತ್ ಸಿಂಗ್ ಯಾದವ್‌ಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ದಕ್ಷಿಣ ದೆಹಲಿಯ ಸರ್ವಪ್ರಿಯ ವಿಹಾರ್‌ನಲ್ಲಿರುವ ವಸತಿ ಆವರಣಕ್ಕೆ ಇ.ಡಿ ದಾಳಿ ನಡೆಸಿದೆ. ಯುಎಇಯಿಂದ ಯಾದವ್ ಕಾರ್ಯನಿರ್ವಹಿಸುತ್ತಿದ್ದು, ಆತನ ಸಹಚರ ಅಮನ್ ಕುಮಾರ್‌ಗೆ ಸಂಬಂಧಿಸಿದ ಮನೆ ಇದಾಗಿದೆ. ಯಾದವ್‌ಗೆ ಸಂಬಂಧಿಸಿದ ಗುರುಗ್ರಾಮ್ ಮತ್ತು ರೋಹ್ಟಕ್‌ನ ಹಲವು ಸ್ಥಳಗಳ ಮೇಲೂ ಇಡಿ ದಾಳಿ ನಡೆಸಿದೆ.
ಮಂಗಳವಾರ ಶುರುವಾದ ದಾಳಿ ಇನ್ನೂ ಮುಂದುವರಿದಿದೆ. ಇಂದು ಬೆಳಗ್ಗೆ ನೋಟು ಎಣಿಕೆ ಯಂತ್ರಗಳೊಂದಿಗೆ ಆಗಮಿಸಿದ ಬ್ಯಾಂಕ್ ಅಧಿಕಾರಿಗಳು ಅಪಾರ ಪ್ರಮಾಣದ ನಗದು, ಆಭರಣ, ಬ್ಯಾಂಕ್ ಚೆಕ್ ಪುಸ್ತಕ ಹಾಗೂ ಇತರ ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ. ಕಂತೆ ಕಂತೆಯ ಹಣದ ರಾಶಿ ಹಾಗೂ ವಜ್ರಾಭರಣ ತುಂಬಿದ ಸೂಟ್ ಕೇಸ್ ಇರುವ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ರಾಜ್ಯದಲ್ಲಿ ರಾಷ್ಟ್ರೀಯ ಔಷಧ ವಿಜ್ಞಾನ ಶಿಕ್ಷಣ & ಸಂಶೋಧನಾ ಸಂಸ್ಥೆ ಆರಂಭಿಸಿ: ಕೇಂದ್ರಕ್ಕೆ ಎಂ.ಬಿ.ಪಾಟೀಲ್ ಪತ್ರ
ಸುಲಿಗೆ, ವಂಚನೆ, ಹಣ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾದವ್ ಹಾಗೂ ಅವರ ಸಹಚರನ ವಿರುದ್ಧ ಹರಿಯಾಣ. ಮತ್ತು ಉತ್ತರ ಪ್ರದೇಶದ ಪೊಲೀಸರು ದಾಖಲಿಸಿದ 14 ಎಫ್‌ಐಆರ್ ಹಾಗೂ ಚಾರ್ಜ್ ಶೀಟ್ ಆಧಾರದಲ್ಲಿ ಇ.ಡಿ ತನಿಖೆ ನಡೆಸುತ್ತಿದೆ. ʻಜೆಮ್ಸ್ ಟ್ಯೂನ್ಸ್ʼ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆಮ್ ರೆಕಾರ್ಡ್ಸ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಮಾಲೀಕನೂ ಆಗಿದ್ದ ಯಾದವ್, ಕೊಲೆ, ಸುಲಿಗೆ, ವಂಚನೆ, ಅಕ್ರಮ ಭೂಕಬಳಿಕೆ ಮತ್ತು ಹಿಂಸಾತ್ಮಕ ಅಪರಾಧಗಳು ಸೇರಿದಂತೆ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ಇಡಿ ಹೇಳಿದೆ.

