– 100 ನೋಟಿನ ಪ್ರತಿ ಕಂತೆಯಿಂದ 4 ನೋಟು ಎಗರಿಸಿದ್ದರು!
– ಬ್ಯಾಂಕ್ ಉದ್ಯೋಗಿ ಮನೆಯಲ್ಲಿದ್ದ ಕಂತೆಯಲ್ಲೂ ಇದೇ ಕತೆ!
ಮುರಳೀಧರ ಎಚ್.ಸಿ
ಬೆಂಗಳೂರು/ಶಿವಮೊಗ್ಗ: ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನಕ್ಕೂ ಮುನ್ನ ಐಟಿ ಅಧಿಕಾರಿಗಳು ಶನಿವಾರ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಇಂದೊಂದೇ ದಿನ ವಿವಿಧೆಡೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು 4 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದ್ದಾರೆ. ಅದರಲ್ಲೂ ಹಣ ಸಾಗಾಟಕ್ಕೆ ಬಳಸಿದ ರೀತಿ ಎಲ್ಲರನ್ನೂ ಬೆಚ್ಚಿ ಬೀಳಿಸುವಂತೆ ಮಾಡಿದೆ.
Advertisement
ಇದಕ್ಕೆ ಕಾರಣ ಕಾರಿನ ಸ್ಟೆಪ್ನಿ ಟೈರ್‍ನೊಳಗೆ ಇಟ್ಟಿದ್ದ 2 ಕೋಟಿ 30 ಲಕ್ಷ ರೂಪಾಯಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಹಣವನ್ನು ಶಿವಮೊಗ್ಗ ಹಾಗೂ ಭದ್ರಾವತಿಗೆ ಚುನಾವಣೆಗೆ ಹಂಚಿಕೆ ಮಾಡಲು ಕೊಂಡೊಯ್ಯುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಇನ್ನೊಂದೆಡೆ ಬಾಗಲಕೋಟೆಯಲ್ಲಿ ಮನೆಯೊಂದರಿಂದ 1 ಕೋಟಿ ರೂಪಾಯಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Advertisement
Advertisement
ಐಟಿ ಇಲಾಖೆ ಹೇಳೋದೇನು?
ಬೆಂಗಳೂರಿನಿಂದ ಶಿವಮೊಗ್ಗ ಹಾಗೂ ಭದ್ರಾವತಿಗೆ ಹಣವನ್ನು ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ನಾವು ಹಣ ಕೊಂಡೊಯ್ಯುತ್ತಿದ್ದವರನ್ನು ಅಡ್ಡಗಟ್ಟಿ ವಾಹನವನ್ನು ತಪಾಸಣೆ ಮಾಡಿದೆವು. ಈ ವೇಳೆ ಕಾರಿನ ಸ್ಟೆಪ್ನಿ ಟೈರ್‍ನಲ್ಲಿ 2000 ರೂ.ಗಳ ನೋಟಿನ ಕಂತೆ ಕಂತೆಯೇ ಸಿಕ್ಕಿದೆ. ಈ ಟೈರಿನಲ್ಲಿ 2.30 ಕೋಟಿ ರೂ. ಸಿಕ್ಕಿದೆ. ಈ ಹಣವನ್ನು ಟೈರ್ ಒಳಗಡೆಯಿಂದ ತೆಗೆಯುತ್ತಿರುವ ದೃಶ್ಯಾವಳಿಗಳನ್ನೂ ಐಟಿ ಇಲಾಖೆ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಭದ್ರಾವತಿಯಲ್ಲಿ ಕಾರ್ಯಾಚರಣೆ ಮಾಡಿದಾಗ 60 ಲಕ್ಷ ರೂ. ಸಿಕ್ಕಿದೆ.
Advertisement
ಬ್ಯಾಂಕ್ ಉದ್ಯೋಗಿ ಸಿಕ್ಕಿ ಹಾಕಿಕೊಂಡ!: ಬಾಗಲಕೋಟೆಯ ನವನಗರದಲ್ಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸ್ಥಳೀಯ ಗುಪ್ತಚರ ಮಾಹಿತಿ ಪ್ರಕಾರ ಬ್ಯಾಂಕ್ ಉದ್ಯೋಗಿಯ ಮನೆ ಮೇಲೆ ದಾಳಿ ನಡೆಸಿದ ವೇಳೆ 1 ಕೋಟಿ ರೂ. ಸಿಕ್ಕಿದೆ. ಈ ಹಣವನ್ನು ಚುನಾವಣೆಗೆ ಹಂಚಲೆಂದೇ ಶೇಖರಿಸಲಾಗಿತ್ತು ಎಂಬ ಖಚಿತ ಮಾಹಿತಿ ಲಭ್ಯವಾಗಿದೆ.
ಅಕ್ರಮ ಹಣ ಸಾಗಾಟದಲ್ಲೂ ಅಕ್ರಮ: ಎರಡೂ ಕಡೆ ದಾಳಿ ಮಾಡಿದ ವೇಳೆ ಈ ಹಣವನ್ನು ಚುನಾವಣಾ ಉದ್ದೇಶಕ್ಕಾಗಿ ಬಳಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಸ್ವಾರಸ್ಯಕರ ವಿಚಾರವೆಂದರೆ ಎರಡೂ ಕಡೆಯಲ್ಲಿ ಶೇಖರಿಸಿಟ್ಟ ಹಣದ 100 ನೋಟುಗಳ ಒಂದು ಕಂತೆಯಿಂದ ಸರಾಸರಿ 4 ನೋಟುಗಳು ನಾಪತ್ತೆಯಾಗಿವೆ. ಅದರಲ್ಲೂ ನಾಪತ್ತೆಯಾಗಿರೋ ನೋಟುಗಳೆಲ್ಲಾ 2000 ರೂ. ಮುಖಬೆಲೆಯದ್ದು. ಅಕ್ರಮ ಸಾಗಾಟದಲ್ಲೇ ಮತ್ತೊಂದು ಹಂತದ ಅಕ್ರಮ ನಡೆಯುತ್ತಿರೋದು ಸೋಜಿಗದ ವಿಚಾರ ಎಂದು ಐಟಿ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದಲ್ಲದೆ ವಿಜಯಪುರದಲ್ಲಿ ನಡೆದ ದಾಳಿ ವೇಳೆ 10 ಲಕ್ಷ ರೂಪಾಯಿ ಸಿಕ್ಕಿದೆ. ಕರ್ನಾಟಕ ಹಾಗೂ ಗೋವಾದಲ್ಲಿ ಇಂದು ನಡೆದ ದಾಳಿಯಲ್ಲಿ ಐಟಿ ಅಧಿಕಾರಿಗಳು ಸುಮಾರು 4.50 ಕೋಟಿ ರೂಪಾಯಿಗೂ ಹೆಚ್ಚಿನ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಪ್ರಥಮ ಹಂತದ ಚುನಾವಣೆ ಮುಗಿದ ಬಳಿಕ ಐಟಿ ಅಧಿಕಾರಿಗಳು ಶಿವಮೊಗ್ಗದತ್ತ ದೃಷ್ಟಿ ನೆಟ್ಟಿದ್ದಾರೆ ಎಂದು ಪಬ್ಲಿಕ್ ಟಿವಿ ನಿನ್ನೆ ಮಧ್ಯಾಹ್ನ 3 ಗಂಟೆಗೆ ಸುದ್ದಿ ಪ್ರಸಾರ ಮಾಡಿತ್ತು. ಐಟಿ ಅಧಿಕಾರಿಗಳ ತಂಡ ಎರಡನೇ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳತ್ತ ಮುಖ ಮಾಡಿದೆ ಎಂದೂ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು.