-ಮಾಜಿ ಸಚಿವ ಶಿವರಾಜ್ ತಂಗಡಗಿ ಸೇರಿದಂತೆ 26 ಜನರ ವಿರುದ್ಧ ದೂರು ದಾಖಲು
ಕೊಪ್ಪಳ: ಬೋಗಸ್ ಬಿಲ್ ಮೂಲಕ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಣ ಎತ್ತುವಳಿ ಆರೋಪದ ಹಿನ್ನಲೆ ಮಾಜಿ ಸಚಿವ ಶಿವರಾಜ್ ತಂಗಡಗಿ ಮತ್ತು ಕೊಪ್ಪಳ ಜಿಲ್ಲಾ ಪಂಚಾಯತ ಅಧಿಕಾರಿಗಳು ಸೇರಿದಂತೆ ಒಟ್ಟು 26 ಜನರ ವಿರುದ್ಧ ದೂರು ದಾಖಲಾಗಿದೆ.
ಜಿಲ್ಲೆಯ ಗಂಗಾವತಿ ತಾಲೂಕಿನ ಉಡಮಕಲ್ ಗ್ರಾಮದಲ್ಲಿ 2013 ರಿಂದ 2016ರ ವರೆಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ 32 ಲಕ್ಷ ರೂಪಾಯಿ ಕೆಲಸವನ್ನು ರೇಖಾ ಎಂಬವರು ಮಾಡಿಸಿದ್ದರು. ಬಿಲ್ ಮಾಡುವ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಪಿ.ಡಿ.ಓ ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳು ಲಂಚ ಕೊಟ್ಟು ಬಿಲ್ ಮಾಡಿಸಿಕೊಳ್ಳುವಂತೆ ರೇಖಾ ಅವರಿಗೆ ಒತ್ತಾಯಿಸಿದ್ದಾರೆ. ಲಂಚ ಕೊಡಲು ನಿರಾಕರಿಸಿದಾಗ ಗ್ರಾ.ಪಂ, ತಾ.ಪಂ ಮತ್ತು ಜಿ.ಪಂ. ಅಧಿಕಾರಿಗಳೆಲ್ಲಾ ಸೇರಿ 32 ಲಕ್ಷ ರೂಪಾಯಿಗಳ ಬೊಗಸ್ ಬಿಲ್ ಎತ್ತುವಳಿ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಈ ನಡುವೆ ಕಾಮಗಾರಿ ಮಾಡಿದ ಗುತ್ತಿಗೆದಾರ ಹಣ ಕೇಳಲು ಹೋದರೆ, ಜೀವ ಬೆದರಿಕೆ ಹಾಕಿದ್ದರಂತೆ. ಈ ಕುರಿತು ಗಂಗಾವತಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಗುತ್ತಿಗೆದಾರ ದಾನಪ್ಪನಿಗೆ ಠಾಣೆಯಲ್ಲಿ ಸೂಕ್ತ ಪ್ರತಿಕ್ರಿಯೆ ಸಿಗದೆ ಕೋರ್ಟ್ ಮೆಟ್ಟಿಲೇರಿದ್ದರು. ಗಂಗಾವತಿ ಜಿ.ಎಂ.ಎಫ್.ಸಿ ನ್ಯಾಯಾಲಯವು ದಾನಪ್ಪ ನೀಡಿರುವ ದೂರನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶ ನೀಡಿತ್ತು. ಆದರಿಂದ ಮಾಜಿ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಒಟ್ಟು 26 ಜನರ ವಿರುದ್ಧ ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv