ಬೆಂಗಳೂರು: ನಕಲಿ ಅಂಕಪಟ್ಟಿ ನೀಡಿ ಹುದ್ದೆ ಪಡೆದ ಪ್ರಕರಣದ ತನಿಖೆಯನ್ನ ಎಸಿಬಿ ತನಿಖೆಗೆ ವಹಿಸಿ ಲೋಕಾಯುಕ್ತ ಕೋರ್ಟ್ ಆದೇಶಿಸಿದೆ.
2008 ರಲ್ಲಿ ಸಾರ್ವಜನಿಕ ಗ್ರಂಥಾಲಯ ಹುದ್ದೆಗೆ ಸುಳ್ಳು ಅಂಕಪಟ್ಟಿ ನೀಡಿ ಹುದ್ದೆ ಪಡೆದಿರುವ ಬಗ್ಗೆ ಆರೋಪ ಇತ್ತು. ಈ ಬಗ್ಗೆ ಸರ್ಕಾರ ಸಮಿತಿಯೊಂದನ್ನ ರಚಿಸಿ ತನಿಖೆ ನಡೆಸಿದಾಗ ಅಕ್ರಮ ಸಾಬೀತಾಗಿತ್ತು. ಹೀಗಿದ್ರೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸಚಿವ ತನ್ವೀರ್ ಸೇಠ್ ಯಾವುದೇ ಕ್ರಮಕೈಗೊಳ್ಳಲಿಲ್ಲ.
ಇದರಿಂದ ಬೇಸತ್ತ ದೂರುದಾರ ಸತ್ಯನಾರಾಯಣ ದಾಖಲೆ ಸಮೇತ ಲೋಕಾಯುಕ್ತ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಲೋಕಾಯುಕ್ತ ಕೋರ್ಟ್, ಎಸಿಬಿ ತನಿಖೆಗೆ ಆದೇಶಿಸಿದೆ. ಅಲ್ಲದೇ 158 ಮಂದಿ ವಿರುದ್ಧ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸಿ, ಜನವರಿ 31, 2018 ರೊಳಗೆ ಕೋರ್ಟ್‍ಗೆ ವರದಿ ನೀಡುವಂತೆ ಲೋಕಾಯುಕ್ತ ಕೋರ್ಟ್ ಸೂಚಿಸಿದೆ.
ಸುಳ್ಳು ಅಂಕಪಟ್ಟಿ ನೀಡಿ ಕೆಲಸ ಪಡೆದ ಹಗರಣವನ್ನ ಪಬ್ಲಿಕ್ ಟಿವಿ ಬಯಲಿಗೆಳೆದಿತ್ತು.