ಚಿಕ್ಕಮಗಳೂರು: ಜಿಲ್ಲೆಯಲ್ಲಿರುವ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಷಿ ಅವರು ಯೂರೋಪ್ ಪ್ರವಾಸದಲ್ಲಿದ್ದ ವೇಳೆ ಅವರ ಎಟಿಎಂ ಕಾರ್ಡ್ ದುರ್ಬಳಕೆ ಮಾಡಿಕೊಳ್ಳಲಾಗಿತ್ತು. ಆದರೆ ಈಗ ಕೇಸ್ ಕ್ಲೋಸ್ ಆಗದಿದ್ದರೂ, ಕಳ್ಳರೂ ಇನ್ನೂ ಸಿಗದಿದ್ದರೂ 20 ಲಕ್ಷದ 89 ಸಾವಿರದ 558 ರೂ. ಅಕೌಂಟ್‍ಗೆ ವಾಪಸ್ ಬಂದಿದ್ದು, ಹಲವು ಅನುಮಾನಗಳು ಹುಟ್ಟಿಕೊಂಡಿದೆ.
ಕಳಸಾದ ಕರ್ನಾಟಕ ಬ್ಯಾಂಕಿನ ಜೋಷಿ ಅವರ ಅಕೌಂಟಿನಿಂದ ದುಷ್ಕರ್ಮಿಗಳು 20 ಲಕ್ಷಕ್ಕೂ ಅಧಿಕ ಹಣವನ್ನ ಡ್ರಾ ಮಾಡಿಕೊಂಡಿದ್ದರು. ವಿದೇಶದಿಂದ ಹಿಂದಿರುಗಿದ ಭೀಮೇಶ್ವರ ಜೋಷಿ ಕಳಸಾದ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು. ಕಳೆದ 29 ದಿನದಿಂದ ತನಿಖೆ ನಡೆಯುತ್ತಿದೆ. ಕಳ್ಳರಿನ್ನೂ ಅರೆಸ್ಟ್ ಆಗಿಲ್ಲ. ಈ ನಡುವೆ ಅಷ್ಟು ದೊಡ್ಡ ಮೊತ್ತದ ಹಣ ಜೋಷಿಯವರ ಅಕೌಂಟ್‍ಗೆ ಹಿಂದಿರುಗಿರೋದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಖಾತೆಗೆ ಹಣವನ್ನು ಹಿಂದಿರುಗಿರೋದ್ರಿಂದ ನಿಜಕ್ಕೂ ಹಣ ಡ್ರಾ ಆಗಿತ್ತಾ? ಅಥವಾ ಬ್ಯಾಂಕ್‍ನವರೇ ಲೆಕ್ಕದಲ್ಲಿ ಹೆಚ್ಚು ಕಡಿಮೆ ಮಾಡಿದ್ದಾರಾ? ಕಳ್ಳರು ಸಿಗದೆ ಆ ಹಣ ಹೇಗೆ ಸಿಕ್ತು? ಅನ್ನೋ ಅನುಮಾನ ಮೂಡಿದೆ. ಜನಸಾಮಾನ್ಯರು ಒಂದು ಸಾವಿರ ಕಳೆದುಕೊಂಡರೆ ಅರ್ಜಿ, ಐಡಿ ಪ್ರೂಫ್ ಅಂತೆಲ್ಲಾ 45 ದಿನಕ್ಕೂ ಹೆಚ್ಚು ಕಾಲ ಅಲೆಯಬೇಕು. ಆದರೆ ಕಳ್ಳರೇ ಸಿಗದೆ ಇಷ್ಟು ದೊಡ್ಡ ಮೊತ್ತದ ಹಣ ವಾಪಸ್ ಬರೋಕೆ ಹೇಗೆ ಸಾಧ್ಯ ಎಂದು ಬ್ಯಾಂಕ್ ಸಿಬ್ಬಂದಿಗಳೇ ಸ್ಪಷ್ಟಪಡಿಸಬೇಕಿದೆ.