ಕಲಬುರಗಿ: ಎಚ್.ಡಿ ಕುಮಾರಸೇನೆಯ ರಾಜ್ಯಾಧ್ಯಕ್ಷ ವೀರಣ್ಣ ಕೊರಳ್ಳಿರವರು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.
ಮೋಸ, ವಂಚನೆ ಮತ್ತು ವಚನಭ್ರಷ್ಟತೆ ಎಂಬುದು ಸಿಎಂ ಕುಮಾರಸ್ವಾಮಿಗೆ ರಕ್ತಗತವಾಗಿ ಬಂದಿದೆ ಎಂದು ಬಿ.ಎಸ್.ಯಡಿಯೂರಪ್ಪ ಇತ್ತೀಚೆಗೆ ವಿಧಾನಸಭೆಯಲ್ಲಿ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಈ ಹೇಳಿಕೆಯಿಂದ ನೊಂದ ಎಚ್.ಡಿ.ಕುಮಾರಸೇನೆ ರಾಜ್ಯಧ್ಯಕ್ಷರಾದ ವೀರಣ್ಣ ಕೊರಳ್ಳಿ, ಜೆಡಿಎಸ್ ಮತ್ತು ಕುಮಾರಸ್ವಾಮಿ ಕಾರ್ಯಕರ್ತರು ಸೇರಿ ಕಲಬುರಗಿಯ 5 ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಯಡಿಯೂರಪ್ಪ ಹೇಳಿಕೆ ವಿರುದ್ಧ ಖಾಸಗಿ ದೂರು ನೀಡಿದ್ದಾರೆ. ಈ ಕುರಿತು ಭಾರತದ ಸಂವಿಧಾನದಲ್ಲಿ ವೈಯಕ್ತಿಕ ನಿಂದನೆಯಡಿ ಪ್ರಕರಣ ದಾಖಲಿಸುವಂತೆ ನ್ಯಾಯಾಲಯದಿಂದ ಆದೇಶವನ್ನು ನೀಡಿದೆ.
ಇನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು ಖಾಸಗಿ ದೂರಿನ ವಿಚಾರಣೆ ನಡೆಸಲು ಜುಲೈ 30 ರಂದು ನಿಗದಿಪಡಿಸಿದ್ದಾರೆ. ಅಷ್ಟರೊಳಗೆ ಯಡಿಯೂರಪ್ಪರವರನ್ನು ಪೊಲೀಸರು ಬಂಧಿಸಿ ಕಾನೂನಿಗೆ ಒಪ್ಪಿಸಲಿ. ಇಲ್ಲವಾದಲ್ಲಿ ನಮ್ಮ ಕಾನೂನು ಹೋರಾಟ ಮುಂದುವರಿಯುತ್ತದೆ ಎಂದು ವೀರಣ್ಣ ಎಚ್ಚರಿಕೆ ನೀಡಿದ್ದಾರೆ.