ಲಕ್ನೋ: 10 ರೂಪಾಯಿ ನಾಣ್ಯಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ ಅಂಗಡಿ ಮಾಲೀಕನ ವಿರುದ್ಧ ದೂರು ದಾಖಲಾಗಿರುವ ಘಟನೆ ಮಧ್ಯಪ್ರದೇಶದ ಮೊರೇನಾ ಜಿಲ್ಲೆಯ ಜೌರಾ ನಗರದಲ್ಲಿ ನಡೆದಿದೆ.
ಗುರುವಾರ ಸಂಜೆ ಜೌರಾ ಪಟ್ಟಣದಲ್ಲಿರುವ ಅಂಗಡಿಗೆ ಒಬ್ಬ ಗ್ರಾಹಕ ಹ್ಯಾಂಡ್ ಕರ್ಚಿಫ್ ತೆಗೆದುಕೊಳ್ಳಲು ಹೋಗಿದ್ದರು. ಹ್ಯಾಂಡ್ ಕರ್ಚಿಫ್ ಖರೀದಿಸಿ ಎರಡು 10 ರೂ. ನಾಣ್ಯಗಳನ್ನು ಅಂಗಡಿ ಮಾಲೀಕನಿಗೆ ನೀಡಿದ್ದರು. ಆದರೆ ಮಾಲೀಕ ನಾಣ್ಯಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾಗಿ ಜೌರಾ ಪೊಲೀಸ್ ಠಾಣೆಯ ಮೇಲ್ವಿಚಾರಕ ಪ್ರವೀಣ್ ತ್ರಿಪಾಠಿ ತಿಳಿಸಿದ್ದಾರೆ.
Advertisement
ಅಂಗಡಿ ಮಾಲೀಕನ ವಿರುದ್ಧ ಐಪಿಸಿ ಸೆಕ್ಷನ್ 188ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕಾಯ್ದೆಯಡಿ ಆರೋಪಿಗೆ ಸುಮಾರು 6 ತಿಂಗಳವರೆಗೆ ಜೈಲು ಶಿಕ್ಷೆ ಆಗಬಹುದು.
Advertisement
ಅಂಗಡಿಯವರು 10 ರೂ. ನಾಣ್ಯಗಳನ್ನು ಸ್ವೀಕರಿಸುತ್ತಿಲ್ಲ ಎಂಬ ಮಾಹಿತಿ ತಿಳಿದ ನಂತರ ಇಲ್ಲಿನ ಜಿಲ್ಲಾಧಿಕಾರಿ ಸುತ್ತೋಲೆ ಹೊರಡಿಸಿ, ಈ ರೀತಿ 10 ರೂ. ನಾಣ್ಯಗಳನ್ನು ಯಾರಾದರೂ ತೆಗೆದುಕೊಳ್ಳಲು ನಿರಾಕರಿಸಿದರೆ ಅದು ಭಾರತೀಯ ಕರೆನ್ಸಿಗೆ ಮಾಡುವ ಅಪಮಾನ ಎಂದು ಪರಿಗಣಿಸಲಾಗುತ್ತದೆ ಎಂದಿದ್ದರು ಅಂತ ತ್ರಿಪಾಠಿ ಹೇಳಿದ್ದಾರೆ.