ರಾಯಚೂರು: ಮಹಾನ್ ಸಂಗೀತಗಾರ ತೇನ್‍ಸಿಂಗ್ ತಮ್ಮ ಸಂಗೀತದ ಮೋಡಿಯಿಂದ ಮಳೆ ಸುರಿಸಿದ್ದ ಅನ್ನೋದನ್ನ ಕೇಳಿದ್ದೀವಿ ಅಷ್ಟೇ. ಆದರೆ ರಾಯಚೂರಿನಲ್ಲಿ ಸ್ವಾಮಿಜಿಯೊಬ್ಬರು ಒಂದೇ ಒಂದು ಮಾತಿನಿಂದ ಜಾತ್ರೆಯ ತೇರನ್ನ ಚಲಿಸುವಂತೆ ಮಾಡುತ್ತಾರೆ. ನೂರಾರು ವರ್ಷಗಳಿಂದಲೂ ಈ ಮಠದ ಸ್ವಾಮಿಗಳು ಈ ಪವಾಡ ಮಾಡುತ್ತಲೇ ಬಂದಿದ್ದಾರೆ. ನಂಬುವುದು ಬಿಡುವುದು ಭಕ್ತರಿಗೆ ಬಿಟ್ಟದ್ದು, ಆದ್ರೆ ಇದುವರೆಗೂ ಇದು ಹೇಗೆ ಸಾಧ್ಯ ಅನ್ನೋದಕ್ಕೆ ಉತ್ತರವಂತೂ ಸಿಕ್ಕಿಲ್ಲ.
Advertisement
ರಾಯಚೂರಿನ ದೇವದುರ್ಗದ ಗಬ್ಬೂರಿನ ಬೂದಿಬಸವೇಶ್ವರ ಮಠದ ಅಂಗಳದಲ್ಲಿ ಈ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ. ಆದ್ರೆ ಎಲ್ಲಾ ಊರುಗಳಲ್ಲಿ ನಡೆಯುವಂತೆ ಇಲ್ಲಿಯೂ ಜಾತ್ರೆ ನಡೆಯುತ್ತಿದ್ದರೆ ಅಂತಾ ವಿಶೇಷವೇನಿರಲಿಲ್ಲ. ಆದ್ರೆ ಈ ಜಾತ್ರೆಯಲ್ಲಿನ ತೇರು ಮಠದ ಸ್ವಾಮಿಜಿ ಆದೇಶವಿಲ್ಲದೆ ಒಂದಿಂಚು ಕದಲುವುದಿಲ್ಲ. ಎಷ್ಟೇ ಆನೆ ಕಟ್ಟಿ ಎಳೆದರೂ ಅಲುಗಾಡಲ್ಲ ಅನ್ನೋ ನಂಬಿಕೆ ಜನರಲ್ಲಿದೆ.
Advertisement
ಗಬ್ಬೂರಿನ ಬೂದಿಬಸವೇಶ್ವರ ಮಠದ ಶ್ರೀಗಳು “ಬಾ ಬಸವ’ ಎಂದು ಕರೆದರೆ ಮಾತ್ರ ತೇರು ತಾನಾಗಿಯೇ ಐದು ಹೆಜ್ಜೆಯಷ್ಟು ಮುಂದಕ್ಕೆ ಚಲಿಸುತ್ತೆ. ಬಳಿಕ ಹಗ್ಗಗಳನ್ನ ಕಟ್ಟಿ ಭಕ್ತರು ಮುಂದಕ್ಕೆ ಎಳೆದುಕೊಂಡು ಹೋಗುತ್ತಾರೆ. ಇದನ್ನ ಪವಾಡ ಅಂತಲೇ ಜನ ನಂಬಿದ್ರು ಜಾತ್ರೆಯ ಗಲಾಟೆಯಲ್ಲಿ ಈ ಪವಾಡ ಸ್ಪಷ್ಟವಾಗಿ ಯಾರಿಗೂ ಕಾಣಲ್ಲ. ಆದ್ರೆ ಈ ಜಾತ್ರೆಯನ್ನ ನೋಡಿದ ಭಕ್ತರಿಗೆ ಮುಕ್ತಿ ಸಿಗುತ್ತೆ ಅನ್ನೋ ನಂಬಿಕೆಯಿದೆ.
Advertisement
Advertisement
ಸುಮಾರು ನಾಲ್ಕುನೂರು ವರ್ಷಗಳ ಇತಿಹಾಸವಿರುವ ಈ ಮಠದ ಎಂಟನೇ ಶ್ರೀಗಳಾದ ಬೂದಿ ಬಸವೇಶ್ವರ ಶಿವಾಚಾರ್ಯರು ತಮ್ಮ ಹಿರಿಯರ ಪವಾಡವನ್ನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಮಠದ ಮುಖ್ಯದ್ವಾರದ ಎದುರುಗಡೆ ಅಲಂಕಾರಗೊಂಡು ನಿಲ್ಲುವ ತೇರು ಅದು ಹೇಗೆ ತಾನು ತಾನಾಗೇ ಚಲಿಸುತ್ತೆ ಅನ್ನೋದು ಇನ್ನೂ ಯಕ್ಷಪ್ರಶ್ನೆಯಾಗಿ ಉಳಿದಿದೆ.
ಒಟ್ನಲ್ಲಿ, ಜನ ಮರುಳೋ ಜಾತ್ರೆ ಮರುಳೋ ಗೊತ್ತಿಲ್ಲ ಸಡಗರ ಸಂಭ್ರಮದಿಂದ ನಡೆಯೋ ಜಾತ್ರೆಯಲ್ಲಿ ಇಂತಹದೊಂದು ಪವಾಡ ನಡೆಯುತ್ತದೆ ಅಂತಲೇ ಜನ ನಂಬಿದ್ದಾರೆ. ರಾಜ್ಯ ಮಾತ್ರವಲ್ಲದೆ ಮಹಾರಾಷ್ಟ್ರ, ಆಂಧ್ರಪ್ರದೇಶದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡು ಜಾತ್ರೆಗೆ ಹರಿದು ಬರುತ್ತಿದೆ.