ಕಾರಿನಲ್ಲಿ ಕ್ರಾಶ್ ಗಾರ್ಡ್ ಬ್ಯಾನ್: ಅಳವಡಿಸಿದ್ರೆ ಬೀಳುತ್ತೆ ಭಾರೀ ದಂಡ!

Public TV
3 Min Read
bull bar 1

ನವದೆಹಲಿ: ಕಾರ್ ಹಾಗೂ ಇತರೇ ವಾಹನಗಳಲ್ಲಿ ಅಕ್ರಮವಾಗಿ ಅಳವಡಿಸಿರುವ ಬುಲ್ ಬಾರ್ ಅಥವಾ ಕ್ರಾಶ್ ಗಾರ್ಡ್ ಗಳನ್ನು ತೆಗೆಯಲು ತಕ್ಷಣವೇ ಕ್ರಮಕೈಗೊಳ್ಳಬೇಕೆಂದು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಸುತ್ತೋಲೆ ಹೊರಡಿಸಿದೆ.

ರಸ್ತೆ ಅಪಘಾತದ ಹೆಚ್ಚಿನ ಸಮಯದಲ್ಲಿ ವಾಹನಗಳಿಗೆ ಅಳವಡಿಸಿರುವ ಬುಲ್ ಬಾರ್‍ ಗಳಿಂದ ಪಾದಚಾರಿಗಳಿಗೆ ಹೆಚ್ಚು ಅಪಾಯವಾಗುತ್ತಿದೆ ಎಂದು ತಿಳಿಸಿರುವ ಸಚಿವಾಲಯ ತಕ್ಷಣವೇ ವಾಹನಗಳಲ್ಲಿ ಅಳವಡಿಸಿರುವ ಕ್ರಾಶ್ ಗಾರ್ಡ್ ಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದೆ. ಅಲ್ಲದೇ ಬುಲ್ ಬಾರ್ ಅಳವಡಿಸಿರುವ ವಾಹನಗಳಿಗೆ ಭಾರೀ ದಂಡವನ್ನು ವಿಧಿಸಲು ಅವಕಾಶವನ್ನು ನೀಡಿದೆ.

 

bull bar c

ಏನಿದು ಕ್ರಾಶ್ ಗಾರ್ಡ್?
ವಾಹನಗಳಿಗೆ ಸಣ್ಣ ಅಪಘಾತದ ಸಮಯದಲ್ಲಿ ಹೆಚ್ಚಿನ ಹಾನಿಯಾಗದಿರಲಿ ಎಂಬ ಕಾರಣಕ್ಕೆ ಹಾಗೂ ವಾಹನಗಳ ಅಂದವನ್ನು ಹೆಚ್ಚಿಸಲು ಬುಲ್ ಬಾರ್ ಅಥವಾ ಕ್ರಾಶ್ ಗಾರ್ಡ್ ಗಳನ್ನು ಅಳವಡಿಸಲಾಗುತ್ತದೆ. ಕಾರು, ಎಸ್‍ಯುವಿ, ಪಿಕಪ್, ಬಸ್, ಟ್ರಕ್ ಗಳಲ್ಲಿ ಕ್ರಾಶ್ ಗಾರ್ಡ್ ಗಳನ್ನು ಅಳವಡಿಸಲಾಗುತ್ತದೆ. ಇವುಗಳನ್ನು ಕಬ್ಬಿಣ ಮತು ಫೈಬರ್ ನಿಂದ ತಯಾರಿಸಲಾಗುತ್ತದೆ. ಕೆಲವರು ಹೆಚ್ಚಿನ ಸಂಖ್ಯೆಯ ಲೈಟ್ ಗಳನ್ನು ಹಾಕಿ ವಾಹನದ ಅಂದವನ್ನು ಹೆಚ್ಚಿಸಲು ಈ ಕ್ರಾಶ್ ಗಾರ್ಡ್ ಅಳವಡಿಸುತ್ತಾರೆ.

ಕಾನೂನು ಏನು ಹೇಳುತ್ತೆ?
1988ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 52 ರ ಪ್ರಕಾರ ಯಾವುದೇ ರೀತಿಯ ವಾಹನಗಳಿಗೆ ಬುಲ್ ಬಾರ್ ಮತ್ತು ಕ್ರಾಶ್ ಗಾರ್ಡ್ ಅಳವಡಿಸುವುದನ್ನು ನಿಷೇಧಿಸಲಾಗಿದೆ. ಈ ಕಾರಣದಿಂದ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ಈ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೆ ಮಾಡಲು ರಾಜ್ಯ ಸರ್ಕಾರಿಗಳಿಗೆ ಪತ್ರ ಬರೆದಿದೆ.

ಕೇಂದ್ರದ ಅದೇಶದ ಅನ್ವಯ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು, ಆಯಾ ರಾಜ್ಯಗಳ ಸಾರಿಗೆ ಇಲಾಖೆ ಕಾರ್ಯದರ್ಶಿಗಳು ಮತ್ತು ಆಯುಕ್ತರು ಈ ಕುರಿತು ಕ್ರಮ ಕೈಗೊಳ್ಳಬೇಕಾಗಿದೆ. ಅಲ್ಲದೇ 1998 ರ ಕಾಯ್ದೆಯ 190, 191 ಸೆಕ್ಷನ್ ಗಳ ಅನ್ವಯ ಬುಲ್ ಬಾರ್ ಅಳವಡಸಿರುವ ವಾಹನ ಚಾಲಕ ಅಥವಾ ಮಾಲೀಕರಿಗೆ ದಂಡ ವಿಧಿಸುವ ಅವಕಾಶವನ್ನು ನೀಡಲಾಗಿದೆ.

Bull Bar a

ನಿಷೇಧ ಯಾಕೆ?
ಅಪಘಾತದ ಸಂದರ್ಭದಲ್ಲಿ ವಾಹನವನ್ನು ರಕ್ಷಿಸಲು ಮತ್ತು ಪಾದಾಚಾರಿಗಳು ವಾಹನ ಸವಾರರಿಗೆ ಗಂಭೀರವಾಗಿ ಏಟು ಬೀಳದೇ ಇರಲಿ ಎನ್ನುವ ಕಾರಣಕ್ಕೆ ಮುಂದುಗಡೆ ಫೈಬರ್ ಬಂಪರ್ ಅಳವಡಿಸಲಾಗುತ್ತದೆ. ಒಂದು ವೇಳೆ ವಾಹನ ಡಿಕ್ಕಿಯಾದಾಗ ಪಾದಾಚಾರಿಗಳು, ಸವಾರರು ಮೇಲಕ್ಕೆ ಚಿಮ್ಮಿ ಬಾನೆಟ್ ಮೇಲೆ ಬೀಳುವಂತೆ ಈ ಕ್ರಾಶ್ ಗಾರ್ಡ್ ವಿನ್ಯಾಸ ಮಾಡಲಾಗುತ್ತದೆ. ಆದರೆ ಅಪಘಾತದ ವೇಳೆ ವಾಹನಕ್ಕೆ ಡಿಕ್ಕಿ ಹೊಡೆಯುವ ಬೈಕ್ ಸವಾರರಿಗೆ, ಪಾದಚಾರಿಗಳಿಗೆ, ಪ್ರಾಣಿಗಳಿಗೆ ಹೆಚ್ಚಿನ ಪೆಟ್ಟು ಬೀಳುತ್ತದೆ. ಈ ಬಂಪರ್ ಬಿದ್ದ ನಂತರ ಪಾದಾಚಾರಿಗಳು ಮೇಲಕ್ಕೆ ಹಾರುವ ಬದಲು ಕೆಳಕ್ಕೆ ಬಿದ್ದು ಮೃತಪಡುವ ಸಾಧ್ಯತೆ ಹೆಚ್ಚಿರುತ್ತದೆ.

sensors

ಎರಡನೇಯದಾಗಿ ಕಾರಿನಲ್ಲಿ ಡ್ರೈವರ್ ಮತ್ತು ಪ್ರಯಾಣಿಕರ ರಕ್ಷಣೆಗೆ ಏರ್ ಬ್ಯಾಗ್ ಇರುತ್ತದೆ. ಈ ಏರ್ ಬ್ಯಾಗ್  ಸೆನ್ಸರ್ ಗಳನ್ನು ಹೆಡ್ ಲ್ಯಾಂಪ್ ಹಿಂಬಂದಿಯಲ್ಲಿ ಅಳವಡಿಸಲಾಗುತ್ತದೆ. ಆದರೆ ಗಂಭೀರ ಅಪಘಾತವಾದಾಗ ಬುಲ್ ಬಾರ್ ನಿಂದಾಗಿ ಅಪಘಾತದ ತೀವ್ರತೆ ಈ ಸೆನ್ಸರ್ ಗೆ ತಟ್ಟುವುದಿಲ್ಲ. ಗಂಭೀರ ಅಪಘಾತ ಸಂಭವಿಸಿದರೂ ಈ ಏರ್ ಬ್ಯಾಗ್ ತೆರೆಯದೇ ಇದ್ದರೆ ಕಾರಿನ ಒಳಗಡೆ ಇರುವ ವ್ಯಕ್ತಿಗಳು ಸಾವನ್ನಪ್ಪುವ ಸಾಧ್ಯತೆ ಹೆಚ್ಚಿರುತ್ತದೆ.

ಈ ಕ್ರಾಶ್ ಗಾರ್ಡ್ ಗಳನ್ನು ವಾಹನಗಳ ಚಾಸಿಗಳಿಗೆ ಅಳವಡಿಸಲಾಗುತ್ತದೆ. ಯಾವುದೇ ಅಪಘಾತವಾದರೂ ಚಾಸಿಗೆ ಭಾರೀ ಪೆಟ್ಟು ಬೀಳುತ್ತಿರುತ್ತದೆ. ರಕ್ಷಣೆಗಿಂತಲೂ ಅಪಾಯವೇ ಹೆಚ್ಚಾಗುತ್ತಿರುವ ಕಾರಣ ಈಗ ಸರ್ಕಾರ ಈ ಕ್ರಾಶ್ ಗಾರ್ಡ್ ಗಳನ್ನು ತೆಗೆಯುವಂತೆ ಸೂಚಿಸಿದೆ.

bull bar d

ದಂಡ ಎಷ್ಟು?
ಬುಲ್ ಬಾರ್ ತೆರವಿಗೆ ರಾಜ್ಯ ಸರ್ಕಾರದ ಅಧಿಕಾರಿಗಳು ನಿಗಧಿತ ಅವಧಿಯನ್ನು ಕಲ್ಪಿಸಿಕೊಡುತ್ತಾರೆ. ನಂತರದಲ್ಲಿಯೂ ವಾಹನಗಳಿಂದ ಬುಲ್ ಬಾರ್ ಗಳನ್ನು ತೆರವುಗೊಳಿಸದೇ ಇದ್ದರೆ ದಂಡ ವಿಧಿಸಲಾಗುತ್ತದೆ. ಮೊದಲ ಬಾರಿ 1 ಸಾವಿರ ರೂ. ದಂಡ ವಿಧಿಸಬಹುದಾಗಿದ್ದು, ಎರಡನೇ ಬಾರಿ ಈ ಮೊತ್ತವನ್ನು 2 ಸಾವಿರಕ್ಕೆ ಹೆಚ್ಚಿಸಲಾಗುತ್ತದೆ. ಒಂದು ವೇಳೆ ವಾಹನದ ತಯಾರಕರು ಬುಲ್ ಬಾರ್ ಅಳವಡಿಸಿದ್ದರೆ ಹಾಗೂ ಬುಲ್ ಬಾರ್ ಗಳನ್ನು ಮಾರಾಟ ಮಾಡುವವರಿಗೆ 5 ಸಾವಿರ ರೂ ದಂಡ ವಿಧಿಸಬಹುದಾಗಿದೆ.

bull bar e

bull bar b 1

bull bar 2

bullbars

bull bar

bull bar b

Share This Article
Leave a Comment

Leave a Reply

Your email address will not be published. Required fields are marked *