ಬೀಜಿಂಗ್: ವಿಮಾನದ ಮೇಲಿನ ಕಂಪಾರ್ಟ್‍ಮೆಂಟ್‍ನಲ್ಲಿ ಇಡಲಾಗಿದ್ದ ಲಗೇಜ್‍ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ವಿಮಾನ ಮೂರು ಗಂಟೆ ತಡವಾಗಿ ಹೊರಟ ಘಟನೆ ಚೀನಾದಲ್ಲಿ ನಡೆದಿದೆ.
ಭಾನುವಾರದಂದು ಚೀನಾದ ಗುವಾಂಗ್‍ಝೌ ನಿಂದ ಶಾಂಘೈ ಗೆ ಹೊರಟಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ಟೇಕ್ ಆಫ್ ಆಗುವುದಕ್ಕೆ ಸ್ವಲ್ಪ ಸಮಯ ಮುಂಚೆ ಪ್ರಯಾಣಿಕರು ವಿಮಾನವೇರುತ್ತಿದ್ದಾಗ ಲಗೇಜ್‍ವೊಂದರಲ್ಲಿದ್ದ ಪವರ್ ಬ್ಯಾಂಕಿನಲ್ಲಿ ಬೆಂಕಿ ಹೊತ್ತಿಕೊಂಡು ಬ್ಯಾಗ್‍ಗೆ ಆವರಿಸಿದೆ. ಇದನ್ನ ಕಂಡ ಜನ ಕ್ಷಣಕಾಲ ಆತಂಕಕ್ಕೆ ಒಳಗಾಗಿದ್ದರು. ಆದ್ರೆ ವಿಮಾನದ ಸಿಬ್ಬಂದಿ ಬಂದು ಬೆಂಕಿ ಆರಿಸಿದ್ದು, ಹೆಚ್ಚಿನ ಅನಾಹುತವೇನೂ ಆಗಿಲ್ಲ.
ಪ್ರಯಾಣಿಕರೊಬ್ಬರು ಘಟನೆಯ ದೃಶ್ಯವನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಫ್ಲೈಟ್ ಅಟೆಂಡೆಂಟ್‍ವೊಬ್ಬರು ಮೊದಲು ನೀರಿನ ಬಾಟಲಿಯನ್ನ ಬ್ಯಾಗ್ ಮೇಲೆ ಎಸೆದಿದ್ದಾರೆ. ಆಗ ಪ್ರಯಾಣಿಕರೊಬ್ಬರು ಜೊತೆಗೂಡಿ ಬೆಂಕಿ ಆರಿಸಲು ಜ್ಯೂಸ್ ಎರಚಿದ್ದಾರೆ. ಕೆಲವೇ ಸೆಕೆಂಡ್‍ಗಳಲ್ಲಿ ಬೆಂಕಿ ನಂದಿಸಿದ್ದಾರೆ. ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ವೈರಲ್ ಆಗಿದೆ.
ವಿಮಾನಯಾನ ಸಂಸ್ಥೆ ಘಟನೆ ಬಗ್ಗೆ ಹೇಳಿಕೆ ನೀಡಿದ್ದು, ಅಗ್ನಿಶಾಮಕ ಹಾಗೂ ಭದ್ರತಾ ಇಲಾಖೆಯ ನೆರವಿನಿಂದ ಬೆಂಕಿ ನಂದಿಸಲಾಯಿತು. ಯಾವುದೇ ಹೆಚ್ಚಿನ ಅಪಾಯ ಅಥವಾ ಯಾರಿಗೂ ಗಾಯಗಳಾಗಿಲ್ಲ. ತನಿಖೆಯ ಉದ್ದೇಶದಿಂದ ಬ್ಯಾಗ್ ಮಾಲೀಕರನ್ನ ಕರೆಸಲಾಗಿತ್ತು. ಪ್ರಾಥಮಿಕ ತನಿಖೆಯ ಪ್ರಕಾರ ಪವರ್ ಬ್ಯಾಂಕಿಗೆ ಬೆಂಕಿ ಹೊತ್ತಿಕೊಂಡಾಗ ಅದು ಬಳಕೆಯಲ್ಲಿರಲಿಲ್ಲ ಎಂದು ತಿಳಿದುಬಂದಿರುವುದಾಗಿ ಹೇಳಿದೆ. ಘಟನೆಯ ನಂತರ ಪ್ರಯಾಣಿಕರನ್ನ ಕೆಳಗಿಳಿಸಿ ಮತ್ತೊಂದು ವಿಮಾನದಲ್ಲಿ ಕಳಿಸಿಕೊಡಲಾಗಿದ್ದು, ವಿಮಾನ ಮೂರು ಗಂಟೆ ತಡವಾಗಿ ಹೊರಟಿದೆ.
ಆದ್ರೆ ಅಟೆಂಡೆಂಟ್‍ಗಳು ನೀರು ಹಾಗೂ ಜ್ಯೂಸ್ ಬಳಸಿ ಬೆಂಕಿ ಆರಿಸಿದ ರೀತಿ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಜನ ಪ್ರಶ್ನೆ ಮಾಡಿದ್ದಾರೆ. ವಿಮಾನದಲ್ಲಿ ಫೈರ್ ಎಕ್ಸ್‍ಟಿಂಗ್ವಿಷರ್ ಇರಬೇಕಿತ್ತಲ್ಲವಾ, ಅದನ್ನ ಬಳಸಬಹುದಿತ್ತು ಎಂದು ಕೇಳಿದ್ದಾರೆ.
ಆದ್ರೆ ಸಿಬ್ಬಂದಿಯ ಕ್ರಮವನ್ನ ಸಮರ್ಥಿಸಿಕೊಂಡಿರೋ ವಿಮಾನಯಾನ ಸಂಸ್ಥೆ, ಲಿಥಿಯಂ ಬ್ಯಾಟರಿಗಳಿಂದ ಕಾಣಿಸಿಕೊಳ್ಳುವ ಬೆಂಕಿ ಆರಿಸಲು ನೀರು ಬಹಳ ಸೂಕ್ತವಾದುದು ಎಂದು ಹೇಳಿದ್ದಾರೆ.
A fire broke out in the luggage rack of a China Southern airplane in Guangzhou on Sunday after a portable charger carried by a passenger caught fire during the boarding process. The fire was put out promptly. Passengers have been relocated to another plane. pic.twitter.com/8BzNkxh6rg
— People's Daily, China (@PDChina) February 25, 2018