ಸಾಮಾನ್ಯವಾಗಿ ಕೆಲವರಿಗೆ ಸ್ವೀಟ್ ಇಷ್ಟವಾದರೇ ಇನ್ನೂ ಕೆಲವರಿಗೆ ಖಾರ ತಿಂಡಿಗಳು ಇಷ್ಟವಾಗುತ್ತವೆ. ಕೆಲವೊಂದಿಷ್ಟು ಜನರಿಗೆ ಊಟದ ಜೊತೆಗೆ ಅಥವಾ ಊಟದ ಬಳಿಕ ಸ್ವೀಟ್ ತಿನ್ನುವ ಅಭ್ಯಾಸವಿರುತ್ತದೆ. ನಿಮಗೇನಾದ್ರೂ ದಿನಾ ಒಂದೇ ರೀತಿಯ ಸ್ವೀಟ್ ತಿಂದು ಬೋರಾಗಿದ್ರೆ ಒಮ್ಮೆ ಕ್ಯಾರೆಟ್ ರಸ್ಮಲೈ ತಿಂದು ನೋಡಿ. ಇವತ್ತಿನ ನಮ್ಮ ರೆಸಿಪಿಯಲ್ಲಿ ಸುಲಭವಾಗಿ ಕ್ಯಾರೆಟ್ ರಸ್ಮಲೈ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ನೀವೂ ನಿಮ್ಮ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
ಕ್ಯಾರೆಟ್-2
ಹಾಲು- 1 ಬಟ್ಟಲು
ತುಪ್ಪ- ಸ್ವಲ್ಪ
ಸಕ್ಕರೆ- 2 ಚಮಚ
ಸಣ್ಣ ರವೆ- ಅರ್ಧ ಬಟ್ಟಲು
ಫುಲ್ ಕ್ರೀಮ್ ಹಾಲು-4 ಬಟ್ಟಲು
ಸಕ್ಕರೆ- ಅರ್ಧ ಕಪ್
ಬಾದಾಮಿ- 8-10
ಪಿಸ್ತಾ- 8-10
ಏಲಕ್ಕಿ ಪುಡಿ- 1/2 ಚಮಚ
ಕೇಸರಿ ದಳ- 8-10
ಕಸ್ಟರ್ಡ್ ಪೌಡರ್- 2 ಚಮಚ
ಮಾಡುವ ವಿಧಾನ:
* ಮೊದಲು ಕ್ಯಾರೆಟ್‌ಗಳನ್ನು ಕತ್ತರಿಸಿ, ಮಿಕ್ಸಿ ಜಾರಿ ಹಾಕಿ, ಇದಕ್ಕೆ ಅರ್ಧ ಬಟ್ಟಲು ಹಾಲು, ಸಕ್ಕರೆ ಹಾಗೂ ಏಲಕ್ಕಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
* ಬಳಿಕ ಒಲೆಯ ಮೇಲೆ ಬಾಣಲೆ ಇಟ್ಟು, ಅದಕ್ಕೆ 2 ಚಮಚ ತುಪ್ಪವನ್ನು ಹಾಕಿ. ಕಾದ ನಂತರ ರವೆಯನ್ನು ಕೆಂಪಗೆ ಹುರಿದುಕೊಳ್ಳಿ. ಬಳಿಕ ರುಬ್ಬಿದ ಕ್ಯಾರೆಟ್, ಅರ್ಧ ಬಟ್ಟಲು ಹಾಲು ಹಾಕಿ 5-10 ನಿಮಿಷ ಕೈಯಾಡಿಸಿ, ಸ್ವಲ್ಪ ಸ್ವಲ್ಪ ತುಪ್ಪ ಸೇರಿಸಿ ಗಟ್ಟಿಯಾಗುವವರೆಗೆ ಕೈಯಾಡಿಸಿ. ನಂತರ ಒಲೆಯ ಮೇಲಿಂದ ಕೆಳಗಿಳಿಸಿ, ತಣ್ಣಗಾಗಲು ಬಿಡಿ.
*ನಂತರ ಮತ್ತೊಂದು ಪಾತ್ರೆಯಲ್ಲಿ ಹಾಲು ಹಾಕಿ ಚೆನ್ನಾಗಿ ಕಾಯಲು ಬಿಡಿ. ಕಸ್ಟರ್ಡ್ ಪೌಡರ್ ಅನ್ನು ಸ್ವಲ್ಪ ತಣ್ಣಗಿನ ಹಾಲಿನಲ್ಲಿ ಕಲಸಿ, ಕಾದ ಹಾಲಿನೊಂದಿಗೆ ಹಾಕಿ ಮಿಶ್ರಣ ಮಾಡಿ. ತಳ ಹತ್ತದಂತೆ ಕೈಯಾಡಿಸುತ್ತಲೇ ಇರಿ.
* ನಂತರ ಇದಕ್ಕೆ ಸಕ್ಕರೆ, ಕತ್ತರಿಸಿದ ಬಾದಾಮಿ, ಪಿಸ್ತಾ, ಏಲಕ್ಕಿ ಪುಡಿ, ಕೇಸರಿ ದಳ ಹಾಕಿ ಮಿಶ್ರಣ ಮಾಡಿ.
* ಇದೀಗ ಕ್ಯಾರೆಟ್ ಅನ್ನು ಉಂಡೆಗಳನ್ನಾಗಿ ಮಾಡಿ, ಹಾಲು ಬಿಸಿ ಇರುವಾಗಲೇ ಇದಕ್ಕೆ ಉಂಡೆಗಳನ್ನು ಹಾಕಿ. ಉಂಡೆಗಳು ಹಾಲಿನಲ್ಲಿ 1 ಗಂಟೆ ನೆನೆಯಲು ಬಿಟ್ಟರೆ, ರುಚಿಕರವಾದ ಕ್ಯಾರೆಟ್ ರಸ್ಮಲೈ ಸವಿಯಲು ಸಿದ್ಧ.



