ಈಗಂತೂ ಒಂದಿನ ಮಳೆ, ಒಂದಿನ ಬಿಸಿಲು ಹೀಗೆ ಹವಾಮಾನ ಬದಲಾವಣೆ ಆಗುತ್ತಲೇ ಇರುತ್ತದೆ. ಮಳೆ ಬರುವ ವೇಳೆ ಬಿಸಿ ಬಿಸಿಯಾಗಿ ಏನಾದರೂ ಕುಡಿಯಬೇಕು, ತಿನ್ನಬೇಕು ಎಂದೆನಿಸುವುದು ಸಹಜ. ಚಳಿಗೆ ಬೆಚ್ಚಗಿನ ಬಿಸಿ ಬಿಸಿ ಸೂಪ್‌ಗಿಂತ ಉತ್ತಮವಾದ ಆಯ್ಕೆ ಮತ್ತೊಂದಿಲ್ಲ. ಇವತ್ತಿನ ನಮ್ಮ ರೆಸಿಪಿಯಲ್ಲಿ ಕ್ಯಾರೆಟ್ ಶುಂಠಿ ಸೂಪ್ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಅಡುಗೆ ಮನೆಯಲ್ಲಿರುವ ಕೆಲವು ಸಾಮಗ್ರಿಗಳನ್ನು ಬಳಸಿ ಈ ಸೂಪ್ ತಯಾರಿಸಬಹುದು. ಅಲ್ಲದೇ ಶೀತ, ಕೆಮ್ಮಿಗೂ ಈ ಸೂಪ್ ರಾಮಬಾಣ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.
ಬೇಕಾಗುವ ಸಾಮಗ್ರಿಗಳು:
ಕ್ಯಾರೆಟ್ -ಮೂರು
ದೊಡ್ಡ ಗಾತ್ರದ ಶುಂಠಿ
ತರಕಾರಿಗಳು – ಒಂದು ಕಪ್
ಈರುಳ್ಳಿ – 2
ಕಿತ್ತಳೆ ರಸ – ಅರ್ಧ ಕಪ್
ಕರಿಮೆಣಸಿನ ಪುಡಿ – ಸ್ವಲ್ಪ
ಅಡುಗೆ ಎಣ್ಣೆ – ಎರಡು ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
* ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿಯಾಗುತ್ತಿದ್ದಂತೆ ಹೆಚ್ಚಿಟ್ಟ ಈರುಳ್ಳಿ ಮತ್ತು ಶುಂಠಿ ಹಾಕಿ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ.
* ಇದಕ್ಕೆ ಕ್ಯಾರೆಟ್ ಹಾಕಿಕೊಳ್ಳಿ, ಅಗತ್ಯವಿದ್ದಷ್ಟು ನೀರು ಹಾಗೂ ರುಚಿಗೆ ತಕ್ಕ ಉಪ್ಪು ಹಾಕಿ ಬೇಯಲು ಬಿಡಿ.
* ನೀರಿನಂಶ ಕಡಿಮೆಯಾಗಿ ಸ್ವಲ್ಪ ಗಟ್ಟಿಯಾಗುವವರೆಗೆ ಕುದಿಸಿಕೊಳ್ಳಿ. ನಂತರ ಕಿತ್ತಳೆ ರಸವನ್ನು ಸೇರಿಸಿ 2-3 ನಿಮಿಷ ಕುದಿಯಲು ಬಿಡಿ.
* ಆ ಬಳಿಕ ಈ ಪಾತ್ರೆಯನ್ನು ಉರಿಯಿಂದ ತೆಗೆದು ತಣ್ಣಗಾಗಲು ಬಿಡಿ. ಬೇಯಿಸಿಟ್ಟ ಮಿಶ್ರಣವನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ.
* ರುಬ್ಬಿದ ಮಿಶ್ರಣವನ್ನು ಮತ್ತೆ ಕುದಿಯಲು ಸ್ಟವ್ ಮೇಲೆ ಇಡಿ. ಕುದಿಯುತ್ತಿದ್ದಂತೆ ಇದಕ್ಕೆ ಕರಿಮೆಣಸಿನ ಪುಡಿ ಸೇರಿಸಿದರೆ ಕ್ಯಾರೆಟ್ ಶುಂಠಿ ಸೂಪ್ ಸವಿಯಲು ಸಿದ್ಧ.