Saturday, 21st July 2018

Recent News

ಗುಡ್‍ನ್ಯೂಸ್ ಮತ್ತೆ ಇಳಿಕೆ ಆಯ್ತು ಸ್ಟೆಂಟ್ ಬೆಲೆ

ನವದೆಹಲಿ: ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ(ಎನ್‍ಪಿಪಿಎ) ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಬಳಸುವ ಡ್ರಗ್ ಎಲುಟಿಂಗ್ ಸ್ಟೆಂಟ್ ಬೆಲೆ(ಡಿಇಎಸ್) ಬೆಲೆಯನ್ನು ಇಳಿಕೆ ಮಾಡಿದೆ.

ಇಲ್ಲಿಯವರೆಗೆ ಡಿಇಎಸ್ ಸ್ಟೆಂಟ್ ಬೆಲೆ 30,180 ರೂ. ದರ ನಿಗದಿಯಾಗಿತ್ತು. ಈಗ 2,300 ರೂ. ಇಳಿಕೆಯಾಗಿ 27,880 ರೂ. ಗರಿಷ್ಟ ದರ ನಿಗದಿಯಾಗಿದೆ. ಬಾರ್ ಮೆಟಲ್ ಸ್ಟೆಂಟ್ ಗರಿಷ್ಠ ಬೆಲೆ 7,400 ರೂ. ನಿಂದ 7,660 ರೂಪಾಯಿಗೆ ಏರಿಕೆಯಾಗಿದೆ.

ಜಿಎಸ್‍ಟಿ ಹೊರತುಪಡಿಸಿದ ದರ ಇದಾಗಿದ್ದು, 5% ಜಿಎಸ್‍ಟಿ ಹೇರಿದರೆ ಡಿಇಎಸ್ ಬೆಲೆ 29,285 ರೂ. ಆದರೆ ಬಾರ್ ಮೆಟಲ್ ಸ್ಟಂಟ್ ಗರಿಷ್ಟ ದರ 8,043 ರೂ. ಆಗಲಿದೆ.

ದೇಶದಲ್ಲಿ ಹೃದಯದ ರಕ್ತನಾಳಗಳಲ್ಲಿ ರಕ್ತ ಸಂಚಲನದ ಅಡೆತಡೆ ನಿವಾರಿಸುವ ಶಸ್ತ್ರಚಿಕಿತ್ಸೆಗೆ 95% ಡಿಇಎಸ್ ಸ್ಟಂಟ್‍ಗಳನ್ನು ಬಳಸಲಾಗುತ್ತಿದೆ. ನೂತನ ಪರಿಷ್ಕೃತ ದರ ಮಂಗಳವಾರದಿಂದ ಜಾರಿಯಾಗಿದ್ದು 2019ರ ಮಾರ್ಚ್ 31ರವರೆಗೆ ಈ ಬೆಲೆ ಜಾರಿಯಲ್ಲಿರಲಿದೆ.

ಕಳೆದ ವರ್ಷ ಫಬ್ರವರಿ 14 ರಂದು ಎನ್‍ಪಿಪಿಎ ಬಾರ್ ಮೆಟಲ್ ಗರಿಷ್ಟ ದರ 7,400 ರೂ. ನಿಗದಿ ಪಡಿಸಿದ್ದರೆ, ಡಿಇಎಸ್ ಗರಿಷ್ಟ ದರ 30,180 ರೂ. ನಿಗದಿ ಪಡಿಸಿ ಆದೇಶ ಹೊರಡಿಸಿತ್ತು.

ಕೇಂದ್ರ ಸರ್ಕಾರ ಸ್ಟೆಂಟ್ ಗಳ ಬೆಲೆಯನ್ನು ಇಳಿಸಿದ್ದಕ್ಕೆ ಖಾಸಗಿ ಆಸ್ಪತ್ರೆಗಳಿಂದ ವಿರೋಧ ವ್ಯಕ್ತವಾಗಿದೆ. ಬಹಳಷ್ಟು ಆಸ್ಪತ್ರೆಗಳು ಸ್ಟೆಂಟ್‍ಗಳಿಗೆ ಭಾರೀ ದರವನ್ನು ವಿಧಿಸಿ ರೋಗಿಗಳಿಂದ ಹಣವನ್ನು ಲೂಟಿ ಮಾಡುತ್ತಿದ್ದವು. ಸರ್ಕಾರ ಸ್ಟೆಂಟ್ ಗಳ ಬೆಲೆಯನ್ನು ಇಳಿಸಿದ ಬಳಿಕ ಶಸ್ತ್ರಚಿಕಿತ್ಸೆಗೆ ಬಳಕೆಯಾಗುತ್ತಿರುವ ಕ್ಯಾಥೆಟ್ರೆಸ್, ಬಲೂನ್ ಗಳು, ಗೈಡ್ ವಯರ್ ಗಳ ಬೆಲೆ ಏರಿಕೆಯಾಗಿದೆ. ಸ್ಟೆಂಟ್ ಗಳಿಗಿಂತಲೂ ಈಗ ಇವುಗಳ ಬೆಲೆ ಜಾಸ್ತಿಯಾಗಿದೆ. ಇವುಗಳ ಬೆಲೆಯನ್ನು ನಿಯಂತ್ರಿಸಲು ಸರ್ಕಾರದ ಬಳಿ ಕಾನೂನು ಇಲ್ಲದ ಕಾರಣ ಆಸ್ಪತ್ರೆಗಳು ರೋಗಿಗಳಿಂದ ಜಾಸ್ತಿ ಹಣವನ್ನು ಪಡೆಯುತ್ತಿದೆ.

ಆಲ್ ಇಂಡಿಯಾ ಡ್ರಗ್ ಆ್ಯಕ್ಷನ್ ನೆಟ್‍ವರ್ಕ್(ಎಐಡಿಎಎನ್) ತನ್ನ ಹೇಳಿಕೆಯನ್ನು ಪ್ರಕಟಿಸಿ ಎನ್‍ಪಿಪಿಎ ನಿರ್ಧಾರವನ್ನು ಸ್ವಾಗತಿಸಿದೆ. ಅಲ್ಲದೇ ಆಸ್ಪತ್ರೆಗಳು ಆಂಜಿಯೋ ಪ್ಲಾಸ್ಟ್ ಹೆಸರಲ್ಲಿ ಹಣವನ್ನು ರೋಗಿಗಳಿಂದ ಲೂಟಿ ಮಾಡುತ್ತಿರುವ ಬಗ್ಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ(ಸಿಸಿಐ) ತನಿಖೆ ನಡೆಸಬೇಕೆಂದು ಎನ್‍ಪಿಇಎಗೆ ಪತ್ರದ ಮೂಲಕ ಬೇಡಿಕೆ ಇಟ್ಟಿದೆ.

Leave a Reply

Your email address will not be published. Required fields are marked *