– ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರೋ ಕೃಷಿಕ ದಂಪತಿ ಕಂಗಾಲು
ಮಡಿಕೇರಿ: 2018-19ರಲ್ಲಿ ಪ್ರಕೃತಿ ವಿಕೋಪಕ್ಕೆ ನಲುಗಿ ಹೋಗಿದ ಮಡಿಕೇರಿ ತಾಲೂಕಿನ ಮುಕೋಡ್ಲು ಗ್ರಾಮದಲ್ಲಿ ಮತ್ತೆ ರೈತರ ಬದುಕು ಚಿಗುರೊಡೆದಿತ್ತು. ಅಳಿದುಳಿದ ಕೃಷಿ ಭೂಮಿಯಲ್ಲಿ ಕೃಷಿ ಚಟುವಟಿಕೆ ಗರಿಬಿಚ್ಚಿತ್ತು. ಕಾಫಿ, ಏಲಕ್ಕಿ (Cardamom And Coffee crop) ಬೆಳೆದು ಬದುಕು ಕಟ್ಟಿಕೊಳ್ಳುತ್ತಿದ್ರು. ಆದ್ರೆ ಏಕಾಏಕಿ ಬಂದ ಅರಣ್ಯ ಸಿಬ್ಬಂದಿ ರೈತನ ಕಾಫಿತೋಟ, ಏಲಕ್ಕಿ ತೋಟಕ್ಕೆ ನುಗ್ಗಿ ಈ ಜಾಗ ಅರಣ್ಯ ಪ್ರದೇಶಕ್ಕೆ ಸೇರಿದೆ ಅಂತ ತಕರಾರು ತೆಗೆದಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೇ ಕಾಫಿ ಗಿಡಗಳನ್ನ ಕಡಿದುಹಾಕಿದ್ದಾರೆ.
ಅರಣ್ಯ ಸಿಬ್ಬಂದಿಯ ದುರ್ವರ್ತನೆಯಿಂದ ರೈತರಿಗೆ (Farmers) ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇದರಿಂದಾಗಿ ಬೆಳೆಗಾರರು, ಗ್ರಾಮಸ್ಥರು ಅರಣ್ಯ ಇಲಾಖೆಯ ನಡೆಯನ್ನ ತೀವ್ರವಾಗಿ ಖಂಡಿಸಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ನಿರಂತರ ಮಳೆಯಿಂದ ಕಾಫಿ ಬೆಳೆಗಾರರು ಕಂಗಾಲು – ಬಿಜೆಪಿ ನಿಯೋಗದಿಂದ ಸರ್ವೇ ಕಾರ್ಯ
ಏಲಕ್ಕಿ ತೋಟದಲ್ಲಿ ನಡೆದಿದ್ದೇನು?
ಮಡಿಕೇರಿ ತಾಲೂಕಿನ ಮುಕೋಡ್ಲು ಗ್ರಾಮ 2018-19 ರಲ್ಲಿ ಸಂಪೂರ್ಣವಾಗಿ ಪ್ರಕೃತಿ ವಿಕೋಪಕ್ಕೆ ನಲುಗಿ ಹೋಗಿತ್ತು. ಈ ಗ್ರಾಮದಲ್ಲಿ ಅಳಿದುಳಿದ ತೋಟಗಳಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡಿಕೊಂಡು ಇಲ್ಲಿನ ನೂರಾರು ಜನ ರೈತರು, ಬೆಳೆಗಾರರು ಮತ್ತೆ ಬದುಕು ಕಟ್ಟಿಕೊಳ್ಳುತ್ತಿದ್ದರು. ಇಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಈ ಗ್ರಾಮದ ಕಲ್ಸೋಡ್ಸ್ ಎಂಬ ಪೈಸಾರಿ ಜಾಗದಲ್ಲಿ ಬೆಳೆದಿದ್ದ ನಾಣಿಯಪ್ಪ ಅವರಿಗೆ ಸೇರಿದ್ದ ಏಲಕ್ಕಿ ತೋಟದಲ್ಲಿ ಬೆಳೆಯನ್ನ ನಾಶ ಮಾಡಿದ್ದಾರೆ. ಏಲಕ್ಕಿ ತೋಟ ಹಾಗೂ ಕಾಫಿ ತೋಟದ ಜಾಗ ಅರಣ್ಯ ಪ್ರದೇಶಕ್ಕೆ ಒಳಪಟ್ಟಿದೆ ಅಂತ ಹೇಳಿದವರೇ ಭೂಮಾಲೀಕರಿಗೆ ಯಾವುದೇ ನೋಟಿಸ್ ಕೂಡ ಕೊಡದೇ ಏಕಾಏಕಿ ತೋಟಕ್ಕೆ ನುಗ್ಗಿ ಏಲಕ್ಕಿ ಮತ್ತು ಕಾಫಿ ಗಿಡಗಳನ್ನು ಕಡಿದು ಹಾಕಿದ್ದಾರೆ. ಇದರಿಂದ ಮಾಲೀಕರಿಗೆ 5 ಲಕ್ಷರೂಗಿಂಗಳೂ ಅಧಿಕ ವರಮಾನ ನಷ್ಟವಾಗಿದ್ದು, ಕಣ್ಣೀರಿಡುವಂತಾಗಿದೆ.
ಕೃಷಿಕ ದಂಪತಿ ವೃದ್ಧರಾಗಿದ್ದಾರೆ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಪ್ರಸ್ತುತ ಕೃಷಿ ಕೈಗೊಂಡಿರುವ ಜಾಗವು ಪೈಸಾರಿ ಎಂಬ ದಾಖಲೆ ಲಭಿಸಿದೆ. ಆದರೂ ಸಹ ಅರಣ್ಯ ಇಲಾಖೆಯವರು ದೌರ್ಜನ್ಯ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಿರಂತರ ಮಳೆಯಿಂದ ಕೊಡಗಿನಲ್ಲಿ ಮತ್ತೆ ಭೂಕುಸಿತದ ಭೀತಿ
ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ, ಕೃಷಿಕ ದಂಪತಿಗಳೊಂದಿಗೆ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ. ಅರಣ್ಯ ಇಲಾಖೆ ಪರಿಹಾರ ನೀಡಬೇಕು. ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಖುದ್ದಾಗಿ ಜಾಗ ಪರಿಶೀಲನೆ ಮಾಡಬೇಕು. ಏಲಕ್ಕಿ ಕೊಯ್ಲು ಮಾಡುವ ಸಂದರ್ಭವೇ ಗಿಡಗಳನ್ನು ತುಂಡರಿಸಿದ್ದಾರೆ. ಜಿಲ್ಲಾಧಿಕಾರಿ ತಕ್ಷಣ ಮಧ್ಯೆ ಪ್ರವೇಶಿಸಿ ಈ ಜಾಗ ಪೈಸಾರಿಯೋ ಅಥವಾ ಅರಣ್ಯ ಇಲಾಖೆಗೆ ಸೇರಿದ್ದೂ ಎಂಬುದನ್ನು ಮೊದಲು ಬಹಿರಂಗಪಡಿಸಲಿ ಎಂದು ಆಗ್ರಹಿಸಿದ್ದಾರೆ.
50 ವರ್ಷದಿಂದ ಕೃಷಿ ಮಾಡಿಕೊಂಡು ಬಂದಿರುವ ಜಾಗಕ್ಕೆ ದಾಖಲೆ ಒದಗಿಸುವಂತೆ ಈಗಾಗಲೇ ಕಂದಾಯ ಇಲಾಖೆಗೆ 50, 53, 57ರಡಿ ಅರ್ಜಿ ಹಾಕಿದ್ದಾರೆ. ಭೋಗ್ಯದ ಯೋಜನೆಗೂ ಅರ್ಜಿ ಹಾಕಿದ್ದಾರೆ. ಈ ನಡುವೆ ಅರಣ್ಯ ಇಲಾಖೆ ದೌರ್ಜನ್ಯ ಎಸಗಿರುವುದು ಅಕ್ಷಮ್ಯ ಅಪರಾಧ. ಈಗಾಗಲೇ 33/2 ಸರ್ವೆ ನಂಬರ್‌ನಲ್ಲಿ ವಿಭಾಗ ಮಾಡಿ 60 ಎಕ್ರೆ ಜಾಗದ ಪೈಕಿ 4.50 ಸೆಂಟ್ ಜಾಗವನ್ನು ಸ್ಥಳೀಯ ವ್ಯಕ್ತಿಗೆ ದಾಖಲಾತಿ ಮಾಡಿಕೊಟ್ಟಿದ್ದಾರೆ. ಇವರಿಗೆ ಮಾತ್ರ ಮಾಡಿಕೊಟ್ಟಿಲ್ಲ. ರೈತರನ್ನು ಕೆರಳಿಸಲು, ಉದ್ದೇಶಪೂರ್ವಕವಾಗಿ ರೈತರನ್ನು ಕೆಣಕುವ ಯತ್ನಕ್ಕೆ ಅರಣ್ಯ ಇಲಾಖೆ ಕೈ ಹಾಕಿದೆ ಎಂದು ಅಕ್ರೋಶ ಹೋರ ಹಾಕಿದ್ರು. ಇದನ್ನೂ ಓದಿ: ಕೊಡಗಿನಲ್ಲಿ ನಿರಂತರ ಗಾಳಿ ಮಳೆಯಿಂದ ಹರಡುತ್ತಿದೆ ವೈರಲ್ ಫೀವರ್ – ಒಂದೇ ತಿಂಗಳಲ್ಲಿ 3,000 ಕೇಸ್
\