ಜೈಪುರ: ಮಾರಣಾಂತಿಕ ಲಿಂಪಿ ವೈರಸ್‌ನಿಂದಾಗಿ (Lumpy Virus Disease) ರಾಜಸ್ಥಾನದಲ್ಲಿ (Rajasthan) ಹಾಲಿನ ಸಂಗ್ರಹ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಹಾಲಿನಿಂದ ತಯಾರಿಸುವ ಸಿಹಿ ತಿನಿಸುಗಳ (Milk Production) ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.
ಲಿಂಪಿ ವೈರಸ್ ಚರ್ಮರೋಗದಿಂದ (Skin Diseases) ಪ್ರತಿದಿನ 600 ರಿಂದ 700 ಹಸುಗಳು ಸಾಯುತ್ತಿದ್ದು, ಇದರಿಂದ ಹಾಲಿನ ಸಂಗ್ರಹ ಪ್ರಮಾಣ ಶೇ.15 ರಿಂದ 18ರಷ್ಟು ಕಡಿಮೆಯಾಗಿದೆ.
ಈ ಕುರಿತು ಜೈಪುರ ಡೈರಿ ಫೆಡರೇಶನ್‌ನ ಅಧ್ಯಕ್ಷ ಓಂ. ಪೂನಿಯಾ ಮಾತನಾಡಿ, ದಿನನಿತ್ಯದ ಹಾಲಿನ ಸಂಗ್ರಹ ಪ್ರಮಾಣವು 14 ಲಕ್ಷದಿಂದ 12 ಲಕ್ಷ ಲೀಟರ್‌ಗಳಿಗೆ ಇಳಿಕೆಯಾಗಿದೆ. ಸದ್ಯ ಹಾಲು ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಆದರೆ ಪ್ರಾಣಿಗಳ ಸಾವಿನ ಸಂಖ್ಯೆ ಹೀಗೇ ಮುಂದುವರಿದರೆ, ಬಿಕ್ಕಟ್ಟು ಎದುರಾಗಬಹುದು. ಕೋವಿಡ್ ಸಮಯಕ್ಕಿಂತಲೂ ಕೆಟ್ಟ ಪರಿಸ್ಥಿತಿಯನ್ನು ನಾವೀಗ ಎದುರಿಸುತ್ತಿದ್ದೇವೆ. ಹಾಲಿನ ಉತ್ಪಾದನೆ ಕಡಿಮೆಯಾಗುತ್ತಿದ್ದಂತೆ ಸಿಹಿ ತಿನಿಸುಗಳ ಬೆಲೆ ದುಬಾರಿಯಾಗುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 11 ಲಕ್ಷಕ್ಕೂ ಹೆಚ್ಚು ಜಾನುವಾರುಗಳು ಮಾರಕ ವೈರಸ್‌ಗೆ ತುತ್ತಾಗಿದ್ದು, ಈಗಾಗಲೇ 51 ಸಾವಿರ ಜಾನುವಾರುಗಳು ಮೃತಪಟ್ಟಿವೆ. ಉಳಿದವುಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದ್ದು, 12.32 ಲಕ್ಷ ಜಾನುವಾರುಗಳಿಗೆ ಗಾಟ್ ಪಾಕ್ಸ್ ಲಸಿಕೆ ವಿತರಣೆ ಮಾಡಲಾಗಿದೆ. ಇನ್ನೂ 16.22 ಲಕ್ಷ ಡೋಸ್ ಲಸಿಕೆಯನ್ನು ಸಂಗ್ರಹ ಮಾಡಲಾಗಿದೆ.