ಹಾವೇರಿ: ಕಾರೊಂದರ ಟೈರ್ ಸಿಡಿದು ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ನಾಲ್ವರು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ಹೊರವಲಯದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ.
ಭೀಕರ ಅಪಘಾತದಲ್ಲಿ ಮೃತಪಟ್ಟವರನ್ನು ಗುಜರಾತ್ ಮೂಲದ ದಿನೇಶ್ ಬಾಯ್(38), ಲತೀಶ್ ಬಾಯ್(37), ಸುರೇಶ್ ಬಾಯ್(39) ಹಾಗೂ ಕೇರಳ ಮೂಲದ ಸಾಹಲ್(37) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರಿಗೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ – ಚಾಲಕರಿಬ್ಬರೂ ಸ್ಥಳದಲ್ಲೇ ದುರ್ಮರಣ
2 ಕಾರುಗಳ ನಡುವಿನ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಎಸ್ಪಿ ಹನುಮಂತರಾಯ, ಹೆಚ್ಚುವರಿ ಎಸ್ಪಿ ವಿಜಯ್ ಕುಮಾರ್, ಸಿಪಿಐ ಮುತ್ತಪ್ಪ ಗೌಡಪ್ಪಗೌಡರ್ ಹಾಗೂ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ವಹಣೆ ಸಿಬ್ಬಂದಿ ಕೂಡ ಸ್ಥಳಕ್ಕೆ ದೌಡಾಯಿಸಿದ್ದಾರೆ. ಇದನ್ನೂ ಓದಿ: ಡೋಂಗಿ ಬಾಬಾನ ಮೋಹದ ಬಲೆಗೆ ಬಿದ್ದ ವಿವಾಹಿತೆ – ಯಜಮಾನ ಬಲಿ
4 ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ತಾಲೂಕು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಗಾಯಾಳುಗಳನ್ನು ಕೇರಳ ಮೂಲದ ದಾನೇಶ್, ಜೈನಾಬಿ ಹಾಗೂ ಗುಜರಾತ್ ಮೂಲದ ಅಶ್ವಿನ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಜಖಂಗೊಂಡಿದ್ದ ಕಾರುಗಳನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಅತಿಯಾದ ವೇಗದಿಂದ ಸಾಗುತ್ತಿದ್ದ ಕಾರಿನ ಟೈರ್ ಸಿಡಿದಿದ್ದೇ ಅಪಘಾತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.