ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಬ್ಯಾಲದ ಕೆರೆ ಬಳಿ ಭೀಕರ ಅಪಘಾತ ಸಂಭವಿಸಿ 13 ಮಂದಿ ದಾರುಣವಾಗಿ ಸಾವಿಗೀಡಾಗಿದ್ದಾರೆ. ಅವರಲ್ಲಿ ಒಂದೇ ಕುಟುಂಬದ 8 ಜನರು ಮೃತಪಟ್ಟಿದ್ದು, ಇವರು ಕೃಷಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎಂದು ಮೃತರ ಸಂಬಂಧಿಕರು ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸಂಬಂಧಿ, ಮಂಜುನಾಥ್ ಕುಟುಂಬವರು ಧರ್ಮಸ್ಥಳಕ್ಕೆ ಹೋಗಿ ವಾಪಸ್ ಬರುತ್ತಿದ್ದರು. ಆಗ ಈ ಅಪಘಾತ ನಡೆದಿದೆ. ಒಂದೇ ಕುಟುಂಬದ 8 ಜನರು ಮೃತಪಟ್ಟಿದ್ದಾರೆ. ಮೃತರು ಕೃಷಿ ಕೆಲಸ ಮಾಡುತ್ತಿದ್ದರು. ಅಲ್ಲದೇ ಟ್ಯಾಕ್ಟರ್ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ದೇವರ ದರ್ಶನಕ್ಕೆ ಹೋಗಿ ಬರುವಾಗ ಈ ದುರ್ಘಟನೆ ನಡೆದಿದೆ. ಇದು ತುಂಬಾ ದುಃಖದ ಸಂಗತಿಯಾಗಿದೆ ಎಂದು ಕಣ್ಣೀರು ಹಾಕಿದರು. ಇದನ್ನೂ ಓದಿ: ಕುಣಿಗಲ್ ಅಪಘಾತ: ಮಕ್ಕಳ ಮೃತದೇಹಗಳನ್ನು ಕಂಡು ಬಿಕ್ಕಿ ಬಿಕ್ಕಿ ಅತ್ತ ಮಹಿಳಾ ಪೊಲೀಸ್
ಅಪಘಾತ:
ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದು ವಾಪಸ್ಸಾಗುತ್ತಿ ತಮಿಳುನಾಡಿನ ಟವೇರಾ ವಾಹನಕ್ಕೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೊರಟ್ಟಿದ್ದ ಬ್ರೀಜಾ ಕಾರು ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ. ಧರ್ಮಸ್ಥಳಕ್ಕೆ ಹೊರಟ್ಟಿದ್ದ ಬ್ರೀಜಾ ಕಾರು ನಿಯಂತ್ರಣ ತಪ್ಪಿ ಡಿವೈಡರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸದಲ್ಲೇ ರಸ್ತೆಗೆ ಬಂದು ಬಳಿಕ ಟವೇರಾ ಕಾರಿಗೆ ಡಿಕ್ಕಿಯಾಗಿದೆ.
ಟವೇರಾ ಕಾರಿನಲ್ಲಿದ್ದ ತಮಿಳುನಾಡಿನ ಕೃಷ್ಣಗಿರಿಯ ಸೂಳೆಗಿರಿಯ 10 ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ ಮಂಜುನಾಥ್ ಕುಟುಂಬದ 8 ಜನರು ಮೃತಪಟ್ಟಿದ್ದಾರೆ. ಅದರಲ್ಲಿ ಮಂಜುನಾಥ್ ಅವರ ಒಂದೂವರೆ ವರ್ಷದ ಹಾಗೂ ನಾಲ್ಕು ವರ್ಷದ ಮಗುವೂ ಅಸುನೀಗಿದ್ದು ಕರುಣಾಜನಕವಾಗಿತ್ತು. ಬ್ರೀಜಾ ಕಾರಿನಲ್ಲಿನದ್ದ ನಾಲ್ವರು ಬೆಂಗಳೂರಿನ ರಾಮೋನಹಳ್ಳಿಯ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬನಿಗೆ ಕಾಲು ಮುರಿದು ನೆಲಮಂಗಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ರಾಮೋಹಳ್ಳಿಯ ಲಕ್ಷ್ಮೀಕಾಂತ್, ಸಂದೀಪ್, ಮಧು ಮೃತ ದುರ್ದೈವಿಗಳಾಗಿದ್ದಾರೆ. ತಮಿಳುನಾಡಿನ ಕೃಷ್ಣಗಿರಿಯ ಸೂಳೆಗಿರಿಯ ಮಂಜುನಾಥ್, ತನುಜ, ಗೌರಮ್ಮ, ರತ್ನಮ್ಮ, ಸೌಂದರ್ ರಾಜ್, ರಾಜೇಂದ್ರ, ಸರಳ, ಪ್ರಶನ್ಯಾ, ಮಾಲಾಶ್ರೀ ಎಂದು ತಿಳಿದುಬಂದಿದೆ.
ಟವೇರಾದಲ್ಲಿ ಒಟ್ಟು 13 ಜನರು ಪ್ರಯಾಣಿಸುತಿದ್ದು, ಅದರಲ್ಲಿ 10 ಜನ ಸಾವನಪ್ಪಿದ್ದಾರೆ. ಉಳಿದ ಮೂವರು ಬೆಂಗಳೂರು ನಿಮ್ಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಣಿಗಲ್ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆದಿದ್ದು, ಮೃತದೇಹಗಳನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.