– 2 ವರ್ಷಗಳಿಂದ ನಕಲಿ ಸಂಖ್ಯೆಯಲ್ಲೇ ಚಾಲನೆ
ಶಿವಮೊಗ್ಗ: ಟ್ರ್ಯಾಕ್ಟರ್ ಗಳಿಗೆ ನೀಡಲಾಗುವ ನೋಂದಣಿ ಸಂಖ್ಯೆಯನ್ನು ಕಾರಿಗೆ ಹಾಕಿಕೊಂಡು ರಾಜಾರೋಷವಾಗಿ ವಾಹನ ಚಲಾಯಿಸುತ್ತಿದ್ದ ಚಾಲಕನನ್ನು ಬಂಧಿಸಲಾಗಿದ್ದು, ಕಾರನ್ನು ಆರ್‌ಟಿಒ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಹೊಸನಗರ ತಾಲೂಕಿನ ಸೊಪ್ಪಿನಮಲ್ಲೆ ಗ್ರಾಮದ ಉಮೇಶ್ ಹೊಸ ಕಾರು ಖರೀದಿಸಿ, ಟ್ರ್ಯಾಕ್ಟರ್ ನಂಬರ್ ಪ್ಲೇಟಿನ ನಂಬರ್ ಹಾಕಿದ್ದಾನೆ. ಕಾರುಗಳಿಗೆ ಒ. ಓ. P ಮತ್ತು Z ಸಿರೀಸ್ ಗಳಲ್ಲಿ ನೋಂದಣಿ ಸಂಖ್ಯೆ ನೀಡಲಾಗುತ್ತದೆ. ಆದರೆ ಈ ಮಾರುತಿ ಸುಜುಕಿ ಸ್ವಿಫ್ಟ್ ಕಾರಿಗೆ ಖಿ ಸಿರೀಸ್ ಇತ್ತು. ಇದು ಟ್ರ್ಯಾಕ್ಟರ್ ಗಳಿಗೆ ನೀಡುವ ಸಿರೀಸ್ ಆಗಿದ್ದು, ಮಾಲೀಕ ಟ್ರ್ಯಾಕ್ಟರ್ ಗಳಿಗೆ ನೀಡುವ ಖಿ ಸಿರೀಸ್ ನಂಬರ್ ಹಾಕಿಕೊಂಡು ಕಳೆದ ಎರಡು ವರ್ಷಗಳಿಂದ ರಾಜಾರೋಷವಾಗಿ ಸಂಚರಿಸುತ್ತಿದ್ದಾನೆ.
2017 ರಲ್ಲಿ ಹೊಸನಗರ ತಾಲೂಕಿನ ಸೊಪ್ಪಿನಮಲ್ಲೆ ಗ್ರಾಮದ ಉಮೇಶ್ ಎಂಬಾತ ಹೊಸ ಕಾರು ಖರೀದಿಸಿದ್ದಾನೆ. ಆದರೆ ಈತ ಖರೀದಿಸಿದ್ದ ಕಾರಿಗೆ ಖಾಯಂ ಸಂಖ್ಯೆ ಪಡೆಯದೇ ನಕಲಿ ನಂಬರ್ ಹಾಕಿಕೊಂಡು ಚಲಾಯಿಸುತ್ತಿದ್ದ. ಎರಡು ವರ್ಷಗಳಿಂದಲೂ ಇದೇ ನಂಬರ್ ಪ್ಲೇಟ್ ಹಾಕಿಕೊಂಡು ವಾಹನ ಚಲಾಯಿಸಿದ್ದಾನೆ. ಇದೀಗ ತನ್ನ ಕಾರನ್ನು ನಗರದ ಆರ್‌ಟಿಒ ಕಚೇರಿ ಮುಂಭಾಗದಲ್ಲಿಯೇ ಪಾರ್ಕ್ ಮಾಡಿ ಬೇರೆಡೆಗೆ ತೆರಳಿದ್ದ. ಕಾರಿನ ನಂಬರ್ ಪ್ಲೇಟ್ ಗಮನಿಸಿದ ಆರ್‌ಟಿಒ ಅಧಿಕಾರಿಗಳಿಗೆ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಕಾರನ್ನು ನೋಂದಣಿ ಮಾಡಿಸದೇ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ್ದ ಹಿನ್ನೆಲೆಯಲ್ಲಿ ಕಾರನ್ನು ಆರ್‌ಟಿಒ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಮಾಲೀಕ ಉಮೇಶನನ್ನು ಜಯನಗರ ಪೊಲೀಸರಗೆ ಒಪ್ಪಿಸಿದ್ದಾರೆ.
ಅಪಘಾತವಾದರೆ ಪರಿಹಾರವಿಲ್ಲ:
ಹೊಸ ಕಾರು ಖರೀದಿಸಿದ ನಂತರ ಒಂದು ತಿಂಗಳಲ್ಲಿ ಕಾಯಂ ನಂಬರ್ ಪಡೆಯಬೇಕು. ಒಂದು ವೇಳೆ ಪಡೆಯದೇ ತಾತ್ಕಾಲಿಕ ಸಂಖ್ಯೆಯಲ್ಲೇ ಅಥವಾ ನಕಲಿ ಸಂಖ್ಯೆ ಹಾಕಿಕೊಂಡು ವಾಹನ ಓಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಅಲ್ಲದೇ ಒಂದು ವೇಳೆ ಕಾರು ಅಪಘಾತವಾದಲ್ಲಿ ಯಾವುದೇ ಪರಿಹಾರ, ವಿಮೆ ಹಣ. ಅದಕ್ಕಾಗಿ ವಾಹನ ಮಾಲೀಕರು ಮತ್ತು ಸಾರ್ವಜನಿಕರು ಎಚ್ಚರ ವಹಿಸಬೇಕು ಹಾಗೂ ಇಂತಹ ವಾಹನಗಳು ಕಂಡು ಬಂದರೆ ಆರ್‍ಟಿಒ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್.ದೀಪಕ್ ಮನವಿ ಮಾಡಿಕೊಂಡಿದ್ದಾರೆ.