ವಿಜಯಪುರ: ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಬಳಿ ನಡೆದಿದೆ.
ಗೊಳಸಂಗಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಈ ಅಪಘಾತ ನಡೆದಿದ್ದು, ಹೊಸಪೇಟೆ ಮೂಲದ ರಾಜೇಶ್ (32), ಏಸುದಾಸ್ (32) ಮತ್ತು ಭುಜಂಗರಾವ್ (38) ಮೃತ ದುರ್ದೈವಿಗಳು. ಅಪಘಾತದಲ್ಲಿ ಇಬ್ಬರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕಾರಿನಲ್ಲಿ ಹೊಸಪೇಟೆಯಿಂದ ವಿಜಯಪುರಕ್ಕೆ ಆಗಮಿಸುತ್ತಿದ್ದ ವೇಳೆ ಗೊಳಸಂಗಿ ಬಳಿ ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಘಟನೆ ಬಳಿಕ ಲಾರಿ ಬಿಟ್ಟು ಚಾಲಕ ಹಾಗೂ ಕ್ಲೀನರ್ ಇಬ್ಬರೂ ಪರಾರಿಯಾಗಿದ್ದಾರೆ.
ಈ ಘಟನೆ ಕೂಡಗಿ ಎನ್ಟಿಪಿಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಪಘಾತದ ಬಳಿಕ ಸ್ಥಳಕ್ಕೆ ಶೀಘ್ರದಲ್ಲಿ ಪೊಲೀಸರು ಆಗಮಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಅಪಘಾತ ಸ್ಥಳದಲ್ಲಿ ಮೇಲ್ಸೇತುವೆ ನಿರ್ಮಿಸುವಂತೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ತಡೆದು ಟಯರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ರಾಷ್ಟ್ರೀಯ ಹೆದ್ದಾರಿ ಮೇಲೆ ಕಿಲೋ ಮೀಟರ್ ಗಟ್ಟಲೆ ಸಾಲುಗಟ್ಟಿ ವಾಹನಗಳು ನಿಂತಿದ್ದವು.