ಮೈಸೂರು: ದೊಡ್ಡ ಕೆರೆ ಕೋಡಿಗೆ ಕಾರು ಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ಭೇರ್ಯ ಗ್ರಾಮದಲ್ಲಿ ನಡೆದಿದೆ.
ದಶರಥ (27) ಮತ್ತು ಶಿವಣ್ಣ (28) ಮೃತ ದುರ್ದೈವಿಗಳು. ದಶರಥ ಶವ ಕಾರಿನಲ್ಲಿ ಪತ್ತೆಯಾಗಿದ್ದು, ಶಿವಣ್ಣ ಶವ ಘಟನಾ ಸ್ಥಳದಿಂದ ಸ್ವಲ್ಪ ದೂರದ ಜಮೀನಿನಲ್ಲಿ ಪತ್ತೆಯಾಗಿದೆ. ಮೃತರು ಪಿರಿಯಾಪಟ್ಟಣದ ದೇವೇಗೌಡನಕೊಪ್ಪಲು ಬಡಾವಣೆಯ ನಿವಾಸಿಗಳು ಎಂದು ಗುರುತಿಸಲಾಗಿದೆ.
ಕಾರಿನಲ್ಲಿ ಒಟ್ಟು 5 ಮಂದಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಇದೆ. ಇವರೆಲ್ಲರೂ ಪಿತೃ ಪಕ್ಷಕ್ಕಾಗಿ ಭೇರ್ಯ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ದೊಡ್ಡ ಕೆರೆ ಕೋಡಿ ಬಳಿ ಕಾರು ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದೆ. ಪರಿಣಾಮ ದಶರಥ ಮತ್ತು ಶಿವಣ್ಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ಕಾರಿನಲ್ಲಿದ್ದ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಕೆ.ಆರ್ ನಗರ ಇನ್ಸ್ ಪೆಕ್ಟರ್ ರಘು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv