ದತ್ತಪೀಠ ಮಾರ್ಗದಲ್ಲಿ ಕಾರು, ಜೀಪ್ ಡಿಕ್ಕಿ – ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್!

Public TV
1 Min Read
Car jeep collide on Datta Peetha road traffic jam for kilometers 2

ಚಿಕ್ಕಮಗಳೂರು: ರಾಜ್ಯದ ಸುಪ್ರಸಿದ್ಧ ಪ್ರವಾಸಿ ತಾಣ ಪಶ್ಚಿಮ ಘಟ್ಟ ತಪ್ಪಲಿನ ಚಂದ್ರದ್ರೋಣ ಪರ್ವತ ಶ್ರೇಣಿಯ ಕವಿಕಲ್ ಗಂಡಿ ಬಳಿ ಕಾರು-ಜೀಪ್ ನಡುವೆ ಡಿಕ್ಕಿ ಸಂಭವಿಸಿ ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್  (Traffic Jam) ಉಂಟಾಗಿ ಪ್ರವಾಸಿಗರು ಪರದಾಡಿದ್ದಾರೆ.

ಬೆಂಗಳೂರು ನೋಂದಣಿ ಹೊಂದಿರುವ ಜೀಪ್ ಹಾಗೂ ಗುಜರಾತ್ ನೋಂದಣಿಯ ಕಾರಿನ ನಡುವೆ ನಡೆದ ಅಪಘಾತದಿಂದಾಗಿ ರಸ್ತೆಯಲ್ಲಿ ಭಾರೀ ವಾಹನ ದಟ್ಟಣೆ ಉಂಟಾಗಿ ಪ್ರವಾಸಿಗರು ಪರದಾಡುವಂತಾಗಿತ್ತು. ವೀಕ್ ಎಂಡ್ ಹಿನ್ನೆಲೆ ಇಂದು (ಶನಿವಾರ) ಮುಳ್ಳಯ್ಯನಗಿರಿ ಹಾಗೂ ದತ್ತಪೀಠ (Datta Peetha) ಭಾಗಕ್ಕೆ ಸಾವಿರಾರು ಪ್ರವಾಸಿಗರು ಆಗಮಿಸಿದ್ದರು. ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ಇದರ ನಡುವೆ ಕಾರು-ಜೀಪ್ ಡಿಕ್ಕಿಯಿಂದ ಮತ್ತಷ್ಟು ಸಮಸ್ಯೆ ಉಂಟಾಗಿತ್ತು. ಇದನ್ನೂ ಓದಿ: ಈ ಬಾರಿ ದಸರಾ ಸಿದ್ದರಾಮಯ್ಯ ಅಲ್ಲ ನೂತನ ಸಿಎಂ ಮಾಡ್ತಾರೆ: ಆರ್. ಅಶೋಕ್ ಭವಿಷ್ಯ

ಅಪಘಾತದಿಂದ ಕಾರಿನಲ್ಲಿದ್ದವರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ವಾಹನ ದಟ್ಟಣೆ ಸರಿಪಡಿಸಲು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಹಾಗೂ ಪ್ರವಾಸಿಗರು ಹರಸಾಹಸ ಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಲ್ಲಿ ನಿರಂತರವಾಗಿ ಅಪಘಾತಗಳು ನಡೆಯುತ್ತಿದ್ದು, ಪ್ರವಾಸಿ ವಾಹನಗಳೇ ಹೆಚ್ಚಾಗಿ ಅಪಘಾತಕ್ಕೀಡಾಗುತ್ತಿವೆ. ಹಾಗಾಗಿ, ಹೊರ ಜಿಲ್ಲೆಗಳಿಂದ ಆಗಮಿಸುವವರು ಎಚ್ಚರಿಕೆಯಿಂದ ಚಾಲನೆ ಮಾಡಲು ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಇದನ್ನೂ ಓದಿ: ರಾಜ್ಯದಲ್ಲಿ ಆರಿದ್ರಾ ಮಳೆಯಬ್ಬರ – 93 ವರ್ಷಗಳ ಬಳಿಕ ಜೂನ್‌ನಲ್ಲೇ KRS 123 ಅಡಿ ಭರ್ತಿ

Share This Article