ಬೆಂಗಳೂರು: ಕಾರೊಂದು ಡಿವೈಡರ್‌ನಿಂದ ಹಾರಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬಳಿಕ ಪಕ್ಕದ ರಸ್ತೆಗೆ ಹಾರಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಕೆರೆಕತ್ತಿಗನೂರು ಗೇಟ್ ಬಳಿ ನಡೆದಿದೆ.
ಕೆರೆಕತ್ತಿಗನೂರು ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಅಪಘಾತ ಸಂಭವಿಸಿದೆ. ಕಾರು ತುಮಕೂರಿನಿಂದ ಬೆಂಗಳೂರು ಕಡೆಗೆ ಬರುತ್ತಿತ್ತು. ಕಾರಿನಲ್ಲಿ ಒಟ್ಟು ನಾಲ್ವರು ಪ್ರಯಾಣ ಮಾಡುತ್ತಿದ್ದರು. ಕೆರೆಕತ್ತಿಗನೂರು ಗೇಟ್ ಬಳಿ ಬರುತ್ತಿದ್ದಂತೆ ಚಾಲಕನ ಅತಿವೇಗದಿಂದಾಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ನಿಂದ ಹಾರಿದೆ. ನಂತರ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಹೋಗಿ ಬಿದ್ದಿದೆ.
ಅಪಘಾತದ ರಭಸಕ್ಕೆ ರಸ್ತೆ ವಿಭಜಕದ ಸಿಗ್ನಲ್ ಪುಡಿಪುಡಿಯಾಗಿದ್ದು, ಅದೃಷ್ಟವಶಾತ್ ಭಾರೀ ದುರಂತವೊಂದು ತಪ್ಪಿದಂತಾಗಿದೆ. ಸದ್ಯಕ್ಕೆ ಕಾರಿನಲ್ಲಿದ್ದವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅತಿಯಾದ ವೇಗ ಮತ್ತು ಇಳಿಜಾರಿನಿಂದ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಈ ಘಟನೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.