ಬೆಳಗಾವಿ: ಬೆಳ್ಳಂಬೆಳಗ್ಗೆ ಯರಗಟ್ಟಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಲಾರಿ ಚಾಲಕ (Lorry Driver) ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ತಂದೆ-ಮಗ ಸೇರಿ ನಾಲ್ವರಿಗೆ ಗಂಭೀರ ಗಾಯಗಳಾದ ಘಟನೆ ಪಟ್ಟಣದಲ್ಲಿ ನಡೆದಿದೆ.
ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದ ರಂಗಪ್ಪ ಗುರುಸಿದ್ದಪ್ಪ ಪಾಟೀಲ (30) ಸಾವನ್ನಪ್ಪಿದವರು. ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದ ಭೀರೇಶ್ವರ ಬ್ಯಾಂಕ್ ಎದುರಿನ ರಸ್ತೆ ಪಕ್ಕದಲ್ಲಿ ಮೃತ ಚಾಲಕ ಲಾರಿಯನ್ನು ಸೈಡ್ ಗೆ ಹಾಕಿ ಅದರಲ್ಲಿದ್ದ ಸರಕಿಗೆ ಹಗ್ಗ ಕಟ್ಟಿ ಪ್ಯಾಕ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಕಾರಿನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿ ಚಾಲಕನಿಗೆ ಗುದ್ದಿದೆ. ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡಿದ್ದ ಶಾಸಕ ಅರವಿಂದ ಬೆಲ್ಲದ ಚಿಕ್ಕಪ್ಪ ಚಿಕಿತ್ಸೆ ಫಲಿಸದೆ ಸಾವು
ಅಪಘಾತದ ರಭಸಕ್ಕೆ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಅಮರೆಗೌಡ ಮಾಲಿಪಾಟೀಲ (58) ಗೌಡಪ್ಪಗೌಡ ಮಾಲಿಪಾಟೀಲ (25) ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅದರಲ್ಲಿ ವೀರಭದ್ರಗೌಡ ಡಬಿ (32), ಹನುಮಂತ ಬೆಟಗೇರಿ (23) ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಬೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಾಳುಗಳು ರಾಯಚೂರ ಜಿಲ್ಲೆಯ ಸಿಂಧನೂರು ಪಟ್ಟಣದವರು ಎಂಬ ಮಾಹಿತಿ ದೊರೆತಿದೆ.
ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.