ಚಿಕ್ಕಬಳ್ಳಾಪುರ : ತಂಗಿಯನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಬೈಕಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕೋನಪ್ಪಲ್ಲಿ ಗ್ರಾಮದ ಗೇಟ್ ಬಳಿ ನಡೆದಿದೆ.
ರವಿ ವಿದ್ಯಾನಿಕೇತನ ಪ್ರೌಢ ಶಾಲೆಯ ಸೃಷ್ಠಿ (12) ಮೃತ ವಿದ್ಯಾರ್ಥಿನಿ. ಇಂದು ಬೆಳಿಗ್ಗೆ ಅಣ್ಣ ಉಮಾಶಂಕರ್ ಜೊತೆ ಬೈಕ್ ನಲ್ಲಿ ಕೋನಪ್ಪಲ್ಲಿ ಕಡೆಯಿಂದ ಹೆದ್ದಾರಿ ದಾಟಿ ಶಾಲೆ ಕಡೆಗೆ ಬರುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಸೃಷ್ಠಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಸಹೋದರ ಉಮಾಶಂಕರ್ ಗಂಭೀರವಾಗಿ ಗಾಯಗೊಂಡು ಹೆಚ್ಚಿನ ಚಿಕಿತ್ಸಗೆ ಅವರನ್ನು ಕೋಲಾರದ ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
Advertisement
ಅಪಘಾತದ ವೇಳೆ ಕಾರು ಕೂಡ ಪಲ್ಟಿಯಾಗಿದ್ದು, ಕಾರು ಮಾಲೀಕ ಕೋಲಾರ ಸಂಸದ ಕೆಎಚ್ ಮುನಿಯಪ್ಪ ಅಕ್ಕನ ಮಗ ಹಾಗೂ ಎಚ್‍ಪಿ ಗ್ಯಾಸ್ ಏಜೆನ್ಸಿಯ ಮಾಲೀಕ ಶ್ರೀನಿವಾಸ್ ಕೂಡ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆ ದಾಖಲಾಗಿದ್ದಾರೆ. ಘಟನೆ ನಂತರ ಸ್ಥಳೀಯರು ಹಾಗೂ ಸುತ್ತಮುತ್ತಲ ಹಳ್ಳಿಗಳ ಗ್ರಾಮಸ್ಥರು ಸೇರಿದಂತೆ ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿ 234 ರಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಇನ್ನೂ ಅಪಘಾತಕ್ಕೆ ಹೊಸದಾಗಿ ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿರುವ ರಸ್ತೆ ಉತ್ತಮವಾಗಿದ್ದು, ರಸ್ತೆಯಲ್ಲಿ ವಾಹನಗಳು ಅತಿ ವೇಗವಾಗಿ ಸಂಚರಿಸುತ್ತಿವೆ. ಹೀಗಾಗಿ ಅತಿ ವೇಗದಿಂದ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಈ ಮಾರ್ಗದಲ್ಲಿ ಅಪಘಾತಗಳಿಗೆ ಕಡಿವಾಣ ಹಾಗಲು ಗ್ರಾಮಗಳ ಗೇಟ್ ಬಳಿ ರಸ್ತೆ ಉಬ್ಬುಗಳನ್ನ ನಿರ್ಮಿಸುವಂತೆ ಆಗ್ರಹಿಸಿದ್ದು, ಘಟನೆ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿ ತಿಳಿಗೊಳಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.