ಬೆಂಗಳೂರು: ಏರ್ಪೋಟ್ ರಸ್ತೆ ಮಧ್ಯೆದಲ್ಲಿಯೇ ಮಾರುತಿ 800 ಕಾರು ಇದ್ದಕ್ಕಿದ್ದಾಗೆ ಹೊತ್ತಿ ಉರಿದಿರುವ ಘಟನೆ ದೇವನಹಳ್ಳಿ ಬಳಿಯ ಏರ್ಪೋಟ್ ಟೋಲ್ ಬಳಿ ನಡೆದಿದೆ.
ಮಾರತ್ತಹಳ್ಳಿಯ ಜಗದೀಶ್ ಎಂಬವರು ತಮ್ಮ ಕಾರಿನಲ್ಲಿ ಬಳ್ಳಾರಿ ಕಡೆ ಹೋಗುತ್ತಿದ್ದರು. ದಾರಿ ಮಧ್ಯ ಅಂದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ನವಯುಗ ಟೋಲ್ ಬಳಿ ಟಿಕೆಟ್ ತೆಗೆದು ಮುಂದೆ ಪ್ರಯಾಣ ಬೆಳೆಸಿದರು. ಆದರೆ ಟೋಲ್ ಮಧ್ಯೆಯೇ ಇದ್ದಕ್ಕಿದ್ದಂತೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಚಾಲಕ ಕಾರಿನಿಂದ ಕೆಳಗಿಳಿದ್ದಾರೆ.
ನಂತರ ಕಾರು ಧಗಧಗನೆ ಉರಿಸಲು ಪ್ರಾರಂಭಿಸಿದೆ. ಇದನ್ನು ನೋಡಿ ಕೆಲ ಕಾಲ ಸ್ಥಳಿಯರಲ್ಲಿ ಆತಂಕ ಉಂಟಾಗಿತ್ತು. ಬೆಂಕಿಯ ತೀವ್ರತೆಗೆ ಕಾರು ಭಾಗಶಃ ಸುಟ್ಟು ಕರಕಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ದೇವನಹಳ್ಳಿ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬೆಂಕಿ ಅವಘಡದಿಂದ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ.