ವಿಸಿ ನಾಲೆಗೆ ಕಾರು ಬಿದ್ದು ದುರಂತ: ಮೃತರ ಸಂಖ್ಯೆ 3ಕ್ಕೆ ಏರಿಕೆ

Public TV
1 Min Read
Mandya VC Canal

ಮಂಡ್ಯ: ಸೋಮವಾರ ವಿಸಿ ನಾಲೆಗೆ ಕಾರು ಬಿದ್ದ ಪ್ರಕರಣದಲ್ಲಿ ಸಾವಿನ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಸಕಾರು ನಾಲೆಗೆ ಬಿದ್ದಾಗಿನಿಂದ ಪೀರ್‌ಖಾನ್ ನಾಪತ್ತೆಯಾಗಿದ್ದರು. ಇದೀಗ ನಾಪತ್ತೆಯಾಗಿದ್ದ ಪೀರ್‌ಖಾನ್ ಶವ ತಿಬ್ಬನಹಳ್ಳಿ ಬಳಿಯ ವಿಸಿ ನಾಲೆಯಲ್ಲಿ (VC Canal) ಪತ್ತೆಯಾಗಿದೆ.

ಕತ್ತಲಾದ ಹಿನ್ನೆಲೆ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆಯನ್ನು ಮಂಗಳವಾರಕ್ಕೆ ಮುಂದೂಡಿದ್ದರು. ಶೋಧ ಕಾರ್ಯ ನಿಲ್ಲಿಸಿದರು ಸಹ ಕುಟುಂಬಸ್ಥರು, ಸ್ನೇಹಿತರು ಸೇರಿ ತಡರಾತ್ರಿವರೆಗೂ ಫೀರ್ ಖಾನ್ ಮತ್ತು ಅಸ್ಲಂಪಾಷಾಗಾಗಿ ಹುಡುಕಾಟ ನಡೆಸಿದರು. ನಾಲೆಯಲ್ಲಿ ನೀರು ಸ್ಥಗಿತ ಹಿನ್ನೆಲೆ ಮಂಗಳವಾರ ಕಾರ್ಯಾಚರಣೆ ಮುಂದುವರಿಸಿದ್ದರು. ಈ ವೇಳೆ ನಾಲೆಯಲ್ಲಿ ಫೀರ್ ಖಾನ್ ಶವ ಪತ್ತೆಯಾಗಿದೆ.ಇದನ್ನೂ ಓದಿ: ಕೊಟ್ಟೂರು ಗುರುಬಸವೇಶ್ವರ ರಥದೊಳಗಿನ ಸ್ಟೇರಿಂಗ್ ಕಟ್ – ತಪ್ಪಿದ ಭಾರೀ ಅನಾಹುತ

ಈ ಪ್ರಕರಣದಲ್ಲಿ ಬದುಕುಳಿದ ನಯಾಜ್‌ಗೆ ಮಂಡ್ಯ ಮಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕುತ್ತಿಗೆಗೆ ತೀವ್ರ ಪೆಟ್ಟಾಗಿರುವುದರಿಂದ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ವೈದ್ಯರು ನಯಾಜ್‌ನನ್ನು 48 ಗಂಟೆಗಳ ತೀವ್ರ ನಿಗಾ ಘಟಕದಲ್ಲಿಟ್ಟಿದ್ದಾರೆ.

ಮಂಡ್ಯದ ವಿಸಿ ನಾಲೆಯಲ್ಲಿ ದುರಂತಗಳ ಸರಮಾಲೆಯಾಗಿದೆ. ಅವಘಡ ಸಂದರ್ಭ ಮಾತ್ರ ಅರ್ಧಂಬರ್ಧ ಕೆಲಸ ಮಾಡುವ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಜನರು ಆಕ್ರೋಶ ಹೊರಹಾಕಿದರು.

ಹುಲಿಕೆರೆ- ಶಿವಳ್ಳಿ ಮಾರ್ಗದ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ಹಿಂದೆ ಇದೇ ನಾಲೆಗೆ ಕಾರು ಬಿದ್ದು ಚಾಲಕ ಲೋಕೇಶ್ ಸಾವನ್ನಪ್ಪಿದ್ದರು. ನಂತರ ಜಿಲ್ಲಾಡಳಿತ 500 ಮೀಟರ್‌ನಷ್ಟು ದೂರ ಮಾತ್ರ ಬ್ಯಾರಿಕೇಡ್ ಅಳವಡಿಕೆ ಮಾಡಿತ್ತು. ಉಳಿದ ನಾಲ್ಕು ಕಿಲೋ ಮೀಟರ್ ಬ್ಯಾರಿಕೇಡ್ ಅಳವಡಿಸಿದ್ದರೆ ಈ ಅಪಘಾತ ನಡೆಯುತ್ತಿರಲಿಲ್ಲ. ತಕ್ಷಣ ತಡೆಗೋಡೆ ನಿರ್ಮಿಸುವಂತೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.ಇದನ್ನೂ ಓದಿ: ‘ಪುಷ್ಪ 2’ ವಿವಾದದ ಬಳಿಕ ಎಚ್ಚೆತ್ತ ಅಲ್ಲು ಅರ್ಜುನ್

Share This Article