ರಾಮನಗರ: ದೀಪಾವಳಿ ಹಬ್ಬಕ್ಕೆಂದು ಸಂಬಂಧಿಕರ ಮನೆಗೆ ಹೊರಟಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಸ್ವಿಫ್ಟ್ ಕಾರು ಕೆರೆಗೆ ನುಗ್ಗಿದ ಪರಿಣಾಮ ನೀರಿನಲ್ಲಿ ಮುಳುಗಿ ಕಾರಿನಲ್ಲಿದ್ದ ಓರ್ವ ವಿದ್ಯಾರ್ಥಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿರೋ ಹೃದಯವಿದ್ರಾವಕ ಘಟನೆ ರಾಮನಗರದಲ್ಲಿ ನಡೆದಿದೆ.
ತಾಲೂಕಿನ ಕಂಚುಗಾರನಹಳ್ಳಿ ಸಮೀಪದ ಮನಗಾನಹಳ್ಳಿ ಬಳಿ ಈ ಘಟನೆ ನಡೆದಿದ್ದು, ಓರ್ವ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಾರು ಚಲಾಯಿಸುತ್ತಿದ್ದ ಬಿ.ಕಾಂ ವಿದ್ಯಾರ್ಥಿಯಾದ ಹಾರೋಹಳ್ಳಿ ಸಮೀಪದ ಗೊಟ್ಟಿಗೆಹಳ್ಳಿ ನಿವಾಸಿ ಚಿದಾನಂದ್ ಮತ್ತು ಆತನ ಅಕ್ಕನ ಮಕ್ಕಳಾದ ಶಶಾಂಕ್ ಮತ್ತು ಇಂಪನ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
Advertisement
Advertisement
ಬೆಂಗಳೂರಿನ ಗಣಪತಿಪುರ ನಿವಾಸಿ ನಾಗೇಂದ್ರ ಹಾಗೂ ನಿರ್ಗುಣ ದಂಪತಿಯ ಪುತ್ರ ಶಶಾಂಕ್ ಹಾಗೂ ಗೊಟ್ಟಿಗೆಹಳ್ಳಿ ನಿವಾಸಿ ರಾಜಶೇಖರ್ ರವರ ಮಗಳು ಇಂಪನಾ ಸಾವನ್ನಪ್ಪಿದ್ರೆ, ರಾಜಶೇಖರ್ ರವರ ಮತ್ತೋರ್ವ ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
Advertisement
Advertisement
ದೀಪಾವಳಿ ಹಬ್ಬಕ್ಕೆಂದು ಚಿದಾನಂದ್ ತನ್ನ ಅಕ್ಕನ ಮಕ್ಕಳಾದ ಇಂಪನಾ, ದಿಲೀಪ್ ಹಾಗೂ ಶಶಾಂಕ್ ನನ್ನು ಸಿದ್ದಯ್ಯನದೊಡ್ಡಿಯಲ್ಲಿನ ತಮ್ಮ ಸಂಬಂಧಿ ಪುಟ್ಟಸ್ವಾಮಯ್ಯ ಅವರ ಮನೆಗೆ ಸ್ವಿಫ್ಟ್ ಕಾರಿನಲ್ಲಿ ಕರೆದುಕೊಂಡು ತೆರಳುತ್ತಿದ್ದರು.
ಮುತ್ತುಗದಪಾಳ್ಯ ಹಾಗೂ ಮನಗಾನಹಳ್ಳಿ ನಡುವಿನ ಕೆರೆ ಬಳಿ ಕಾರು ಚಲಾಯಿಸುವ ವೇಳೆ ತಿರುವಿನಲ್ಲಿ ಕಾರು ನಿಯಂತ್ರಣ ಕಳೆದುಕೊಂಡು ಕೆರೆಗೆ ನುಗ್ಗಿತ್ತು. ಕೆರೆಗೆ ಬಿದ್ದ ಕೂಡಲೇ ನೀರು ಕಾರಿನೊಳಗೆ ತುಂಬಿಕೊಂಡಿತ್ತು. ಈ ವೇಳೆ ಗ್ರಾಮಸ್ಥರು ಕೆರೆಗೆ ಧುಮುಕಿ ಕಾರಿನಲ್ಲಿದ್ದವರನ್ನು ರಕ್ಷಿಸುವ ಯತ್ನ ನಡೆಸಿದ್ರು. ಆದ್ರೆ ನೀರಿನಲ್ಲಿ ಮೂರು ಜನ ಉಸಿರುಗಟ್ಟಿ ಸಾವನ್ನಪ್ಪಿದ್ರೆ, ಗ್ರಾಮಸ್ಥರಿಂದ ದಿಲೀಪ್ ರಕ್ಷಿಸಲ್ಪಟ್ಟಿದ್ದಾನೆ.
ಘಟನೆ ಸಂಬಂಧ ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮೃತ ದೇಹಗಳನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮುದ್ದಾದ ಮಕ್ಕಳ ಸಾವಿನಿಂದ ಮೃತರ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.