ಹಾಸನ: ಕಾರು-ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಕಾಲು ಮುರಿದುಕೊಂಡು ಗಂಟೆಗಟ್ಟಲೆ ನರಳಾಡಿದರೂ ಯಾರೊಬ್ಬರು ನೆರವಿಗೆ ಬಾರದೆ ಅಮಾನವೀಯತೆ ತೋರಿದ ಘಟನೆ ಹಾಸನ ಜಿಲ್ಲೆ ಆಲೂರು ಬಳಿ ನಡೆದಿದೆ.
ಪ್ರಸನ್ನ ಅಪಘಾತದಲ್ಲಿ ಕಾಲು ಮುರಿದುಕೊಂಡ ಬೈಕ್ ಸವಾರ. ಬೇಲೂರು ತಾಲೂಕು ಬಿಕ್ಕೋಡು ಗ್ರಾಮದ ಪ್ರಸನ್ನ ಸುಮಾರು 1 ಗಂಟೆ ಕಾಲ ರಸ್ತೆಯಲ್ಲಿಯೇ ನರಳಾಡಿದ್ದರು. ಆಲೂರು ಹೊರವಲಯದ ಅರೇಬಿಕ್ ಕಾಲೇಜ್ ಹತ್ತಿರ ಸೋಮವಾರ ಮಧ್ಯಾಹ್ನ ಅಪಘಾತ ಸಂಭವಿಸಿತ್ತು.
ಹಾಸನ ಕಡೆಯಿಂದ ಬರುತ್ತಿದ್ದ ಓಮ್ನಿ ಕಾರು, ಆಲೂರು ಕಡೆಯಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಬೈಕ್ ಸವಾರ ಪ್ರಸನ್ನರ ಕಾಲು ಹಾಗೂ ತಲೆಗೆ ಬಲವಾಗಿ ಪೆಟ್ಟು ಬಿದ್ದು, ಕಾಲು ಮುರಿದಿತ್ತು. ಇದರಿಂದ ಮೇಲೆಳಲಾಗದೇ ರಸ್ತೆಯಲ್ಲಿ ರಕ್ತದ ಮಧ್ಯೆ ಗಾಯಾಳು ಒದ್ದಾಡುತ್ತಿದ್ದರು ಯಾರೊಬ್ಬರೂ ಪ್ರಸನ್ನ ನೆರವಿಗೆ ಬಾರದೇ ಮೂಕ ಪ್ರೇಕ್ಷಕರಾಗಿದ್ದರು.
ಅಯ್ಯೋ ಕಾಪಾಡಿ ಎಂದು ಗಾಯಾಳು ಅಂಗಲಾಚಿದ್ದರು ಜನ ಸುಮ್ಮನೇ ನಿಂತಿದ್ದರು. ನಂತರ ಯಾರೋ ಆಲೂರು ಪೊಲೀಸರು ಮತ್ತು ಹಾಗೂ ಆಂಬುಲೆನ್ಸ್ ಗೆ ಕರೆ ಮಾಡಿದರು. ಫೋನ್ ಮಾಡಿ ಸುದ್ದಿ ತಿಳಿಸಿದ್ದರು. ನಂತರ ಗಂಟೆ ಕಳೆದರು ಪೊಲೀಸರು ಬಾರಲೇ ಇಲ್ಲ.
ಅತ್ತ ರಿಪೇರಿ ಇದೆ ಎನ್ನುವ ಕಾರಣ ನೀಡಿ ಸರ್ಕಾರಿ ಆಂಬುಲೆನ್ಸ್ ಸಹ ಬರಲಿಲ್ಲ. ಕೊನೆಗೆ ತಡವಾಗಿಯಾದರು ಹಾಸನದಿಂದ ಆಗಮಿಸಿದ ಆಂಬುಲೆನ್ಸ್ ಮೂಲಕ ಪ್ರಸನ್ನ ರನ್ನು ಸಾಗಿಸಲಾಯಿತು. ಸದ್ಯ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾರೆ.