ಚಿಕ್ಕಬಳ್ಳಾಪುರ: ಕಾರು (Car) ಚಾಲಕನೊಬ್ಬ ಆಟೋ ರಿಕ್ಷಾಗೆ (Auto Rickshaw) ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ 9 ಮಂದಿ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ (ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ನಡೆದಿದೆ. ಕಾರು ಚಾಲಕ ಕಂಠಪೂರ್ತಿ ಹೆಂಡ (ನೀರಾ) ಕುಡಿದು ಗಾಡಿ ಚಲಾಯಿಸಿದ್ದಾನೆ ಎಂದು ಗಾಯಾಳುಗಳ ಸಂಬಂಧಿಕರು ಆರೋಪಿಸಿದ್ದಾರೆ.
ಕಾರು ಚಾಲಕ ಆಂಧ್ರ ಪ್ರದೇಶದ ಹಿಂದೂಪುರದಿಂದ ಗೌರಿಬಿದನೂರಿನ ಕಡೆ ಬರುತ್ತಿದ್ದಾಗ ಹಳೆಯ ಆರ್‌ಟಿಒ ಕಚೇರಿ ಬಳಿಯಿದ್ದ ಹಂಪ್ಸ್ ಬಳಿ ವೇಗವಾಗಿ ಬಂದಿದ್ದಾನೆ. ಈ ವೇಳೆ ಆಟೋ ರಿಕ್ಷಾಗೆ ಹಿಂಬದಿಯಿಂದ ಗುದ್ದಿದ್ದಾನೆ. ಘಟನೆಯಲ್ಲಿ ಆಟೋ ಹಿಂಬದಿಯಲ್ಲಿ ಕೂತಿದ್ದ ನಾಲ್ವರು ಸೇರಿದಂತೆ 9 ಮಂದಿಗೆ ಗಾಯಗಳಾಗಿವೆ.
ಗಾಯಾಳುಗಳು ದೊಡ್ಡಬಳ್ಳಾಪುರದವರಾಗಿದ್ದು, ಬೈಚಾಪುರ ಗ್ರಾಮದ ಸಂಬಂಧಿಕರ ಮನೆಯ ಶುಭ ಕಾರ್ಯಕ್ಕೆ ಆಗಮಿಸಿ ವಾಪಾಸಾಗುತ್ತಿದ್ದರು. ಘಟನೆಯ ನಂತರ ಗಾಯಾಳುಗಳ ಸಂಬಂಧಿಕರು ಕಾರಿನ ಮೇಲೆ ಸೈಜುಗಲ್ಲು ಎತ್ತಿ ಹಾಕಿ ಗಾಜನ್ನು ಪುಡಿ ಮಾಡಿದ್ದಾರೆ. ಕಾರು ಚಾಲಕ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದ ಎಂದು ಆರೋಪಿಸಲಾಗಿದ್ದು, ಅದಕ್ಕೆ ಪುಷ್ಟಿ ನೀಡುವಂತೆ ನೀರಾ ಬಾಟಲಿಯೊಂದು ಗೇರ್ ಲಿವರ್ ಬಳಿ ಪತ್ತೆಯಾಗಿದೆ. ಘಟನೆಯ ಬಳಿಕ ಗೌರಿಬಿದನೂರು ನಗರ ಪೊಲೀಸರು ವಾಹನಗಳ ಸಮೇತ ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಅಂಬುಲೆನ್ಸ್ ಇಲ್ಲದೇ ಪರದಾಟ:
ಘಟನೆಯಲ್ಲಿ ಗಾಯಗೊಂಡ 9 ಮಂದಿಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಗಂಭೀರವಾಗಿ ಗಾಯಗೊಂಡ 7 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ತಿಳಿಸಿದ್ದಾರೆ. ಈ ವೇಳೆ ಸರ್ಕಾರಿ ಆಸ್ಪತ್ರೆ ಅಂಬುಲೆನ್ಸ್‌ಗಳು (Ambulance) ಇಲ್ಲದೇ ಹೋಗಿದ್ದು, ಆಸ್ಪತ್ರೆ ಮುಂಭಾಗದಲ್ಲೇ ಇದ್ದ 4 ಒಮ್ನಿ ಖಾಸಗಿ ಅಂಬುಲೆನ್ಸ್‌ಗಳಿಗೆ ಗಾಯಾಗಳುಗಳನ್ನು ಶಿಫ್ಟ್ ಮಾಡಲಾಗಿದೆ.
ಗಾಯಾಳುಗಳ ಸಂಬಂಧಿಗಳು ಇವು ಸರ್ಕಾರದ್ದೇ ಇರಬೇಕು ಎಂದುಕೊಂಡು ಹೊರಟಿದ್ದಾರೆ. ಆದರೆ ಮಾರ್ಗಮಧ್ಯೆ ತಲಾ ಅಂಬುಲೆನ್ಸ್‌ಗೆ 3,500 ರೂ. ಕೊಡಬೇಕು ಅಂದಾಗ ಸಂಬಂಧಿಕರು ಅಷ್ಟೊಂದು ಹಣವಿಲ್ಲ ಎಂದಿದ್ದಾರೆ. ಇದರಿಂದ ಗಾಯಾಳುಗಳನ್ನು ಕರೆದುಕೊಂಡು ಹೋಗಿದ್ದ ಖಾಸಗಿ ಅಂಬುಲೆನ್ಸ್ ಚಾಲಕರು ಮರಳಿ ಗೌರಿಬಿದನುರು ಆಸ್ಪತ್ರೆಗೆ ತಂದುಬಿಟ್ಟಿದ್ದಾರೆ.
ಗಂಟೆಗಟ್ಟಲೆ ಕಾದ ಬಳಿಕ ಸರ್ಕಾರಿ ಆಸ್ಪತ್ರೆಯ 1 ಅಂಬುಲೆನ್ಸ್ ಸ್ಥಳಕ್ಕೆ ಆಗಮಿಸಿದ್ದು, ಅದರಲ್ಲಿ ಮೂವರನ್ನು ಬೆಂಗಳೂರಿಗೆ ರವಾನಿಸಲಾಗಿದೆ. ನಂತರ ಸಮಾಜಸೇವಕ ಕೆಂಪರಾಜು ಕಡೆಯಿಂದ 2 ಅಂಬುಲೆನ್ಸ್ಗಳ ಮೂಲಕ ನಾಲ್ವರನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ.