ಮಂಡ್ಯ: `ಅಯೋಗ್ಯ’ ಸಿನಿಮಾ ಶೂಟಿಂಗ್ ಮುಗಿಸಿ ವಾಪಸ್ಸಾಗುತ್ತಿದ್ದಾಗ ಚಿತ್ರತಂಡದ ಕಾರು ಪಲ್ಟಿಯಾಗಿರುವ ಘಟನೆ ಜಿಲ್ಲೆಯ ಕೆರಗೋಡು ಬಳಿಯ ಮಾರಗೌಡನಹಳ್ಳಿಯಲ್ಲಿ ನಡೆದಿದೆ.
ಕೆಲ ದಿನಗಳಿಂದ ನಿನಾಸಂ ಸತೀಶ್ ಅಭಿನಯದ ಅಯೋಗ್ಯ ಚಿತ್ರ ತಂಡ ಮಂಡ್ಯದ ಕೆರಗೋಡು ಸುತ್ತಾಮುತ್ತ ಚಿತ್ರೀಕರಣ ನಡೆಸುತ್ತಿತ್ತು. ಮಂಗಳವಾರ ಮಾರಗೌಡನಹಳ್ಳಿ ಬಳಿ ಚಿತ್ರೀಕರಣ ಮುಗಿಸಿ ನಾಲ್ಕು ಸಹ ಕಲಾವಿದರು ಕಾರಿನಲ್ಲಿ ವಾಪಸ್ಸಾಗುತ್ತಿದ್ದರು. ಈ ಸಂದರ್ಭದಲ್ಲಿ ಕಾರು ರಸ್ತೆಯಲ್ಲಿದ್ದ ರಾಗಿ ಹುಲ್ಲಿನ ಮೇಲೆ ಹೋಗುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಪಲ್ಟಿಯಾಗಿದೆ.
ಕಾರು ಪಲ್ಟಿಯಾದ ಪರಿಣಾಮ ನಾಲ್ಕು ಸಹ ಕಲಾವಿದರಿಗೆ ಸಣ್ಣಾಪುಟ್ಟ ಗಾಯಗಳಾಗಿವೆ. ನಂತರ ಅಲ್ಲೇ ಪಕ್ಕದಲ್ಲಿದ್ದ ಗ್ರಾಮಸ್ಥರು ಬಂದು ಅವರನ್ನು ಕೆರಗೋಡು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯಕ್ಕೆ ನಾಲ್ವರು ಸಹ ಕಲಾವಿದರು ಚೇತರಿಸಿಕೊಂಡಿದ್ದು, ಈ ಘಟನೆಯಿಂದ ಯಾವುದೇ ಅಪಾಯ ಸಂಭವಿಸಿಲ್ಲ.
ಅಯೋಗ್ಯ ಸತೀಶ್ ನೀನಾಸಂ ಅಭಿನಯದ ಹೊಸ ಸಿನಿಮಾವಾಗಿದ್ದು, ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿದ್ದಾರೆ. ಯೋಗರಾಜ್ ಭಟ್ ಶಿಷ್ಯ ಮಹೇಶ್ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಚಿತ್ರೀಕರಣ ಸದ್ಯ ಜೋರಾಗಿ ನಡೆಯುತ್ತಿದೆ.