ಕಾರಿಗೆ ಎತ್ತಿನಗಾಡಿ ಡಿಕ್ಕಿ – ಪಲ್ಟಿ ಹೊಡೆದ ರಾಸುಗಳು

Public TV
1 Min Read
bullock cart

ಚಿಕ್ಕಮಗಳೂರು: ಜಾತ್ರೆ ಮುಗಿಸಿಕೊಂಡು ಊರಿಗೆ ಹಿಂದಿರುಗುವ ವೇಳೆ ವೇಗವಾಗಿದ್ದ ಎತ್ತಿನಗಾಡಿ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಎತ್ತುಗಳು ಕಾರಿನ ಮೇಲಿಂದ ಹಾರಿ ಪಲ್ಟಿಯಾಗಿ ಬಿದ್ದಿವೆ.

ಜಿಲ್ಲೆಯ ಅಜ್ಜಂಪುರ ತಾಲೂಕಿನ ಅಂತರಘಟ್ಟೆ ಜಾತ್ರಾ ಮಹೋತ್ಸವದಲ್ಲಿ ಈ ಅವಘಡ ನಡೆದಿದ್ದು, ಭಾರೀ ಅನಾಹುತ ಕೂದಲೆಳೆ ಅಂತರದಲ್ಲಿ ಪಾರಾದಂತಾಗಿದೆ. ಚಿಕ್ಕಮಗಳೂರು-ಚಿತ್ರದುರ್ಗ ಗಡಿ ಭಾಗದ ಸುಪ್ರಸಿದ್ಧ ಅಂತಘಟ್ಟೆ ಜಾತ್ರೆಯಲ್ಲಿ ಈ ಘಟನೆ ನಡೆದಿದ್ದು, ಎರಡು ಜೋಡೆತ್ತುಗಳು ಗಂಭೀರವಾಗಿ ಗಾಯಗೊಂಡಿವೆ.

bullock cart 1

ಜಾತ್ರೆ ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ಸ್ಪರ್ಧೆಗೆ ಬಿದ್ದ ಎರಡು ಎತ್ತಿನಗಾಡಿ ಚಾಲಕರು ವೇಗವಾಗಿದ್ದ ಎತ್ತಿನ ಬಾಲವನ್ನು ತಿರುವಿ ಎತ್ತುಗಳನ್ನು ಬೆದರಿಸಿದರು. ಪರಿಣಾಮ ವೇಗದಲ್ಲಿದ್ದ ಎತ್ತುಗಳು ಗಾಬರಿಯಿಂದ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿವೆ.

ಈ ವೇಳೆ ನೊಗದ ಹಗ್ಗಕ್ಕೆ ಸಿಲುಕಿ ಪಲ್ಟಿ ಹೊಡೆದಿದ್ದ ಎತ್ತುಗಳನ್ನು ಕುಣಿಕೆಯಿಂದ ಬಿಡಿಸಿ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಆದರೆ ಕಾರಿನ ಮುಂಭಾಗದ ಗಾಜು ಸಂಪೂರ್ಣ ಪುಡಿಪುಡಿಯಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

bullock cart 2

ಕಳೆದ ನಾಲ್ಕೈದು ದಿನಗಳಿಂದ ಜಾತ್ರೆಗೆ ಸಾವಿರಾರು ಜೋಡೆತ್ತಿನ ಗಾಡಿಗಳಲ್ಲಿ ಭಕ್ತರು ಆಗಮಿಸಿದ್ದರು. ಈ ಜಾತ್ರೆಗೆ ಎಷ್ಟೇ ಶ್ರೀಮಂತರಾಗಿದ್ರು ಕೆಲವರು ಗಾಡಿಯಲ್ಲೇ ಬಂದು ಇಲ್ಲೇ ವಾಸ್ತವ್ಯ ಹೂಡಿ ಜಾತ್ರೆಯಲ್ಲಿ ಪಾಲ್ಗೊಳ್ತಾರೆ. ಜಾತ್ರೆ ಮುಗಿಸಿ ಹಿಂದಿರುಗುವಾಗ ನಡೆದ ಅಪಘಾತಕ್ಕೆ ಜನ ಆತಂಕಕ್ಕೀಡಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *