ರಾಮನಗರ: ಡಿವೈಡರ್ಗೆ ಡಿಕ್ಕಿ ಹೊಡೆದು ಹಾರಿದ ಕಾರು ಮತ್ತೊಂದು ರಸ್ತೆಯಲ್ಲಿ ಎದುರಿಗೆ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚನ್ನಪಟ್ಟಣ ತಾಲೂಕಿನ ಮುದುಗೆರೆ ಗ್ರಾಮದ ಬಳಿ ನಡೆದಿದೆ.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಮುದುಗೆರೆ ಸಮೀಪದಲ್ಲಿ ಈ ಘಟನೆ ನಡೆದಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಚನ್ನಪಟ್ಟಣ ತಾಲೂಕಿನ ಸೀಬನಹಳ್ಳಿ ಗ್ರಾಮದ ನಿವಾಸಿಗಳಾದ ರಾಹುಲ್ (18) ಮತ್ತು ಅಭಿಷೇಕ್ (21) ಮೃತ ದುರ್ದೈವಿಗಳು. ಮತ್ತೊಬ್ಬ ಬೈಕ್ ಸವಾರ ಹರ್ಷಿತ್‍ನನ್ನು ಬೆಂಗಳೂರಿನ ನಿಮಾನ್ಸ್‌ಗೆ ದಾಖಲಿಸಲಾಗಿದೆ.
ಬೆಂಗಳೂರಿನಿಂದ ಮೈಸೂರು ಕಡೆಗೆ ಕಾರು ಬರುತ್ತಿತ್ತು. ಆದರೆ ಮುದುಗೆರೆ ಗ್ರಾಮದ ಬಳಿ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಮೊದಲು ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಹಾರಿದ ಕಾರು ಮೈಸೂರು ಕಡೆಯಿಂದ ಚನ್ನಪಟ್ಟಣ ಕಡೆಗೆ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಯುವಕರಿಬ್ಬರು ಮೃತಪಟ್ಟಿದ್ದಾರೆ.
ಅತಿಯಾದ ವೇಗವೇ ಈ ದುರ್ಘಟನೆಗೆ ಕಾರಣ ಎನ್ನಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಚನ್ನಪಟ್ಟಣ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.