ಕೋಲಾರ: ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದಿದ್ದು, ಕಾರಿನ ಕೆಳಗೆ ದಂಪತಿ ಸಿಲುಕಿಕೊಂಡರೂ ಪವಾಡ ರೀತಿಯಲ್ಲಿ ಪಾರಾಗಿರುವ ಘಟನೆ ಕೋಲಾರ ಗಡಿ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು ಗಂಗಾವರಂ ಬಳಿ ನಡೆದಿದೆ.
ಈ ಘಟನೆ ಏಪ್ರಿಲ್ 1 ರಂದು ಗಂಗಾವರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಹೆದ್ದಾರಿ ಪಕ್ಕದಲ್ಲಿದ್ದ ಅಂಗಡಿಗೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ಅಪಘಾತದ ದೃಶ್ಯಗಳು ಸೆರೆಯಾಗಿದೆ. ಈ ಅಪಘಾತದಿಂದ ದಂಪತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದಂಪತಿ ಬೈಕಿನಲ್ಲಿ ಬರುತ್ತಿದ್ದರು. ಚಿತ್ತೂರು ಜಿಲ್ಲೆಯ ಪಲಮನೇರು ಗಂಗಾವರಂ ಬಳಿ ರಸ್ತೆ ದಾಟಲು ಹೋಗಿ ಅಡ್ಡಾದಿಡ್ಡಿಯಾಗಿ ಬೈಕ್ ಚಲಾಯಿಸಿದ್ದಾರೆ. ಆಗ ಹಿಂದೆಯಿಂದ ಕಾರು ವೇಗವಾಗಿ ಬಂದು ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಕೆಳಗೆ ದಂಪತಿ ಸಿಲುಕಿಕೊಂಡಿದ್ದಾರೆ.
ತಕ್ಷಣ ಕಾರು ನಿಲ್ಲಿಸಿ, ಅದರಲ್ಲಿದ್ದವರು ಕಾರಿನ ಕೆಳಗೆ ಸಿಲುಕಿದ ದಂಪತಿಯನ್ನು ಹೊರಗೆಳೆದಿದ್ದಾರೆ. ಇಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿದ್ದಾರೆ.