ಬೆಳಗಾವಿ: ಬಸ್ (Belagavi) ವ್ಯವಸ್ಥೆಗಾಗಿ ಪ್ರತಿಭಟನೆ ನಡೆಸಿದ ನಂತರ ವಾಪಸ್ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಮೂವರು ವಿದ್ಯಾರ್ಥಿನಿಯರಿಗೆ ಕಾರು (Car) ಡಿಕ್ಕಿಯಾದ ಪರಿಣಾಮ 8ನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದು ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾದ ಘಟನೆ ನಿಚ್ಛಣಕಿ ಗ್ರಾಮದಲ್ಲಿ ನಡೆದಿದೆ.
ಕಿತ್ತೂರು ತಾಲೂಕಿನ ನಿಚ್ಛಣಕಿ ಗ್ರಾಮದ ಕಿತ್ತೂರು ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿಯ ಅಕ್ಕವ್ವ ಹೂಲಿಕಟ್ಟಿ ಮೃತ ವಿದ್ಯಾರ್ಥಿನಿ. ಶಾಲೆಗೆ ಹೋಗಲು ಗ್ರಾಮಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲ. ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಕಳೆದ ಹಲವಾರು ದಿನಗಳಿಂದ ಅಕ್ಕವ್ವ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ್, ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು.
ಆದರೆ, ವಿದ್ಯಾರ್ಥಿಗಳ (Student) ಪ್ರತಿಭಟನೆಗೆ (Protest) ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ್ ಸ್ಪಂದಿಸುವ ಕೆಲಸ ಮಾಡಿರಲಿಲ್ಲ. ಆದರೂ ತಮ್ಮ ಪ್ರಯತ್ನ ಮುಂದುವರಿಸಿದ್ದ ವಿದ್ಯಾರ್ಥಿಗಳು ಮನೆಗೆ ಹೋಗಲು ಬಸ್ ವ್ಯವಸ್ಥೆ ಇಲ್ಲದಕ್ಕೆ ನಿನ್ನೆಯೂ ಕಿತ್ತೂರು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದರು. ಬಳಿಕ ಬಸ್ ಇಲ್ಲದೇ ಮನೆಗೆ ನಡದುಕೊಂಡು ಹೋಗುವಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಚಿಕಿತ್ಸೆ ಫಲಿಸದೇ ವಿದ್ಯಾರ್ಥಿನಿ ಅಕ್ಕವ್ವ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: `ನಂದಿನಿ’ ಕನ್ನಡಿಗರ ಜೀವನಾಡಿ, ಅದರ ತಂಟೆಗೆ ಬಂದ್ರೆ ಬಿಜೆಪಿ ಭಸ್ಮವಾಗುತ್ತೆ HDK ಎಚ್ಚರಿಕೆ
ಅದರಲ್ಲಿ ಇನ್ನಿಬ್ಬರಿಗೆ ಗಂಭೀರ ಗಾಯವಾಗಿದೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇತ್ತ ಪ್ರತಿಭಟನೆ ನಡೆಸಿದರೂ ಬಸ್ ವ್ಯವಸ್ಥೆ ಕಲ್ಪಿಸದ ಸಾರಿಗೆ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯಲ್ಲಿ ಅಕ್ಕವ್ವ ಹೂಲಿಕಟ್ಟಿಯ ಸ್ನೇಹಿತೆಯರು, ವಿದ್ಯಾರ್ಥಿಗಳು, ಗ್ರಾಮದ ನಾಗರಿಕರು ಭಾಗಿಯಾಗಿದ್ದಾರೆ. ಇದನ್ನೂ ಓದಿ: ಅಮುಲ್ ಜೊತೆ ಕೆಎಂಎಫ್ ವಿಲೀನ ಇಲ್ಲ: ಸಿಎಂ ಬೊಮ್ಮಾಯಿ