ಚಿಕ್ಕಬಳ್ಳಾಪುರ: ಯುವಕರು ಪ್ರಯಾಣಿಸುತ್ತಿದ್ದ ಕಾರ್ ರಾಷ್ಟ್ರೀಯ ಹೆದ್ದಾರಿ 7ರ ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಸೇತುವೆ ಮೇಲೆ ತಡೆಗೋಡೆಗೆ ಡಿಕ್ಕಿ ಹೊಡೆದು ಕೆಳಗೆ ಉರುಳಿಬಿದ್ದಿದೆ. ತಡೆಗೋಡೆಗೆ ಡಿಕ್ಕಿಯಾದ ಪರಿಣಾಮ ಕಾರಿನ ಚಾಲಕ ಸ್ಥಳದಲ್ಲೇ ಮೃತಪಟ್ಟು ಮೂವರ ಸ್ಥಿತಿ ಚಿಂತಾಜನಕವಾಗಿದೆ.
ಮೃತಪಟ್ಟ ಕಾರಿನ ಚಾಲಕನನ್ನು ಚಿಕ್ಕಬಳ್ಳಾಪುರ ತಾಲೂಕಿನ ತೌಡನಹಳ್ಳಿ ನಿವಾಸಿ 25 ವರ್ಷದ ರಘು ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಇನ್ನೂ ಮೂವರು ಗಾಯಾಳುಗಳಾದ ಅಣಕನೂರು ಗ್ರಾಮದ ಪುನೀತ್, ಸ್ವರೂಪ್ ಹಾಗೂ ದೇವನಹಳ್ಳಿಯ ವಿಕಾಸ್ ತಿಳಿದು ಬಂದಿದೆ. ಗಾಯಾಳುಗಳನ್ನು ಸ್ಥಳೀಯರು ತಕ್ಷಣ ಜಿಲ್ಲಾಸ್ಪತ್ರೆಗೆ ಸಾಗಿಸಿದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರು ಸಿನಿಮೀಯ ರೀತಿಯಲ್ಲಿ ತಡೆಗೋಡೆಗೆ ತಗುಲಿಕೊಂಡಿದ್ದನ್ನು ನೋಡಲು ಜನ ಜಾತ್ರೆ ಸೇರಿತ್ತು. ತಕ್ಷಣ ಸ್ಥಳಕ್ಕೆ ಬಂದ ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಕ್ರೇನ್ ಮೂಲಕ ಕಾರು ತೆರವುಗೊಳಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.