ಬೆಂಗಳೂರು: ಅಡ್ಡಾದಿಡ್ಡಿ ಕಾರು ಚಲಾಯಿಸಿದ ಚಾಲಕನ ಅಜಾಗರೂಕತೆ ಡ್ರೈವಿಂಗ್‍ಗೆ ಬೈಕ್ ಮತ್ತು ಕಾರುಗಳು ಜಖಂ ಆಗಿರುವ ಘಟನೆ ವಿಜಯನಗರದ ರಾಮಮಂದಿರ ಬಳಿ ಇಂದು ತಡರಾತ್ರಿ ಘಟನೆ ನಡೆದಿದೆ.
KA 02 mc 853 ನಂಬರ್ ನ ಇನೋವಾ ಕಾರು ರಸ್ತೆ ಬದಿ ನಿಲ್ಲಿಸಿದ್ದ ಬೈಕ್, ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಸರಣಿ ಅಪಘಾತದ ನಂತರ ಡ್ರೈವರ್ ಕಾರು ನಿಲ್ಲಿಸದೇ ಪರಾರಿಯಾಗಿದ್ದಾನೆ. ಸದ್ಯಕ್ಕೆ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಮದ್ಯಪಾನ ಮಾಡಿ ಕಾರು ಚಲಾಯಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಕಾಡು ಡಿಕ್ಕಿಯಾದ ರಭಸಕ್ಕೆ ವಿದ್ಯುತ್ ಕಂಬವೇ ಮುರಿದು ಬಿದ್ದಿದೆ. ಒಂದು ವೇಳೆ ಅಪಘಾತದ ವೇಳೆ ವಾಹನಗಳಿಗೆ ವಿದ್ಯುತ್ ಪ್ರವಹಿಸಿದ್ದರೆ ಭಾರೀ ಅನಾಹುತ ಹಾಗೂ ಸಾವು ನೋವಿನ ತೀವ್ರತೆ ಜಾಸ್ತಿ ಆಗುತ್ತಿತ್ತು. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ಅಪಘಾತ ಹಿನ್ನೆಲೆಯಲ್ಲಿ ಸ್ಥಳಕ್ಕೆ ವಿಜಯನಗರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಾಖಲೆಗಳ ಪರಿಶೀಲನೆಯಲ್ಲಿ ಅಪಘಾತಕ್ಕೆ ಕಾರಣವಾದ ಕಾರಿನ ನಂಬರ್ ಆಲ್ಟೊ ಕಾರಿನ ಹೆಸರಿನಲ್ಲಿ ನೋಂದಣಿಯಾಗಿರುವುದು ಗೊತ್ತಾಗಿದೆ. ಅಪಘಾತದ ನಂತರ ಸಿಕ್ಕಿ ಬೀಳುವ ಭಯದಲ್ಲಿ ಕಾರು ಚಾಲಕ ಪರಾರಿಯಾಗಿದ್ದಾನೆ. ಆದಷ್ಟು ಬೇಗನೆ ಆರೋಪಿಯನ್ನು ಬಂಧಿಸುವ ಭರವಸೆಯನ್ನು ವಿಜಯನಗರ ಸಂಚಾರಿ ಪೊಲೀಸರು ನೀಡಿದ್ದಾರೆ.