ಸುಹಾಸ್ ಶೆಟ್ಟಿ ಹತ್ಯೆ ಕೇಸ್ – ಎನ್‌ಐಎಗೆ ಹಸ್ತಾಂತರಿಸಲು ಅಮಿತ್ ಶಾಗೆ ಸಂಸದ ಕ್ಯಾ.ಚೌಟ ಪತ್ರ

Public TV
3 Min Read
Brijesh Chowta

ಮಂಗಳೂರು: ಬಜ್ಪೆಯಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಬರ್ಬರ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರವು ತತ್‌ಕ್ಷಣವೇ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಗೆ ವರ್ಗಾಯಿಸಬೇಕೆಂದು ಒತ್ತಾಯಿಸಿ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ (Captain Brijesh Chowta) ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲೇನಿದೆ?
ಸುಹಾಸ್ ಶೆಟ್ಟಿ ಬರ್ಬರ ಹತ್ಯೆ ಘಟನೆಯಿಂದ ನಾನು ದಿಗ್ಭ್ರಮೆಗೊಂಡಿದ್ದು, ಭೀಕರ ಕೊಲೆ ಕೃತ್ಯದ ಕುರಿತು ತೀವ್ರ ಆತಂಕ ಮತ್ತು ನೋವಿನಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ. ಈ ಘಟನೆಯು ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಹೆಚ್ಚುತ್ತಿರುವ ಕಾನೂನುಬಾಹಿರತೆ, ಬಲಗೊಳ್ಳುತ್ತಿರುವ ಇಸ್ಲಾಮಿಕ್ ಮೂಲಭೂತವಾದ ಮತ್ತು ರಾಷ್ಟ್ರ ವಿರೋಧಿ ಶಕ್ತಿಗಳ ಅಟ್ಟಹಾಸಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಸುಹಾಸ್ ಶೆಟ್ಟಿ ಹತ್ಯೆಯು ಕರಾವಳಿ ಮಾತ್ರವಲ್ಲ, ಇಡೀ ರಾಜ್ಯದ ಜನರನ್ನೇ ಬೆಚ್ಚಿ ಬೀಳುವಂತೆ ಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಎಸ್‌ಡಿಪಿಐ, ಪಿಎಫ್ಐ ಮೇಲಿನ ಕೇಸ್‌ ವಾಪಸ್‌ ಪಡೆದು ಅಪರಾಧಕ್ಕೆ ಬೆಂಬಲ: ಸಿಎಂ ವಿರುದ್ಧ ಸಿ.ಟಿ ರವಿ ಕೆಂಡ

ಈ ಹಿಂದೆಯೂ ಇದೇ ರೀತಿಯಲ್ಲಿ ಬಿಜೆಪಿ ಕಾರ್ಯಕರ್ತರಾದ ಸುಳ್ಯದ ಪ್ರವೀಣ್ ನೆಟ್ಟಾರು ಅವರ ಹತ್ಯೆಯನ್ನು ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ನಡೆಸಿದ್ದರು. ಈ ಸಂಘಟನೆಯನ್ನು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರ ಈಗಾಗಲೇ ನಿಷೇಧಿಸಿದೆ. ಇಷ್ಟಾಗಿಯೂ ಈಗ ಪ್ರವೀಣ್ ಮಾದರಿಯಲ್ಲೇ ಮತ್ತೊಬ್ಬ ಹಿಂದೂ ಯುವಕ ತನ್ನ ಪ್ರಾಣ ಕಳೆದುಕೊಂಡಿರುವುದು ಅತ್ಯಂತ ನೋವಿನ ವಿಚಾರ. ಈ ರೀತಿಯ ಹತ್ಯೆಯು ಈ ಪ್ರದೇಶದಲ್ಲಿ ಪಿಎಫ್‌ಐನಂತಹ ಮೂಲಭೂತವಾದಿ ಸಂಘಟನೆಗಳು ಇನ್ನೂ ಸ್ಲೀಪರ್ ಸೆಲ್‌ನಂತೆ ಜೀವಂತವಾಗಿರುವುದನ್ನು ಸ್ಪಷ್ಟಪಡಿಸುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಇದು ಧರ್ಮದ ನಡುವೆ ಆದ ಗಲಾಟೆ ಅಲ್ಲ: ಯು.ಟಿ.ಖಾದರ್

ತಮ್ಮ ಮಗನನ್ನು ಕಳೆದುಕೊಂಡಿರುವ ಸುಹಾಸ್ ಶೆಟ್ಟಿ ಅವರ ಕುಟುಂಬವು ದಿಗ್ಭ್ರಾಂತಗೊಂಡು ನ್ಯಾಯಕ್ಕಾಗಿ ಕಾಯುತ್ತಿದೆ. ಈ ಭಾಗದ ಚುನಾಯಿತ ಪ್ರತಿನಿಧಿಯಾಗಿ ಮತ್ತು ಇಲ್ಲಿನ ನೋವು ಹಾಗೂ ಹತಾಶೆಯನ್ನು ವೈಯಕ್ತಿಕವಾಗಿ ಕಂಡಿರುವ ವ್ಯಕ್ತಿಯಾಗಿ, ಈ ಪ್ರಕರಣದ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ಈ ಕೂಡಲೇ ಎನ್‌ಐಎಗೆ (National Investigation Agency) ಹಸ್ತಾಂತರಿಸಬೇಕೆಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಹಿಂದೂ ಕಾರ್ಯಕರ್ತನ ಹತ್ಯೆ ಬೆನ್ನಲ್ಲೇ ಮಂಗಳೂರಲ್ಲಿ ಮೂವರಿಗೆ ಚಾಕು ಇರಿತ

ಈ ಭೀಕರ ಘಟನೆಯಲ್ಲಿ ನಿಷೇಧಿತ ಪಿಎಫ್‌ಐ (Popular Front of India) ಸಂಘಟನೆಯ ಕಾರ್ಯಕರ್ತರ ಕೈವಾಡದ ಸಾಧ್ಯತೆ ಇರುವುದರಿಂದ ಈ ಕುರಿತು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿರುವುದು ಅತ್ಯಗತ್ಯ. ದಕ್ಷಿಣ ಕನ್ನಡ (Dakshina Kannada) ಮಾತ್ರವಲ್ಲ ಈ ದೇಶದ ಯಾವುದೇ ಭಾಗದಲ್ಲಿ ಮೂಲಭೂತವಾದಿ, ರಾಷ್ಟ್ರ ವಿರೋಧಿ ಮತ್ತು ಜಿಹಾದಿ ಮಾನಸಿಕತೆಯ ಶಕ್ತಿಗಳು ಬೆಳೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಈ ಕೊಲೆ ಕೃತ್ಯದ ಹಿಂದಿರುವ ಸಮಾಜ ಘಾತುಕ ಸಂಘಟನೆಗಳು, ಹತ್ಯೆ ಹಿಂದಿನ ಒಳಸಂಚು, ಇದರಲ್ಲಿ ಭಾಗಿಯಾದವರು ಹಾಗೂ ಕುಮ್ಮಕ್ಕು ನೀಡಿರುವ ದುಷ್ಟಶಕ್ತಿಯನ್ನು ಬುಡ ಸಮೇತ ಕಿತ್ತು ಹಾಕಬೇಕು. ಆ ಮೂಲಕ ಕಾನೂನು ಮೇಲಿರುವ ಜನರ ವಿಶ್ವಾಸವನ್ನು ಮರುಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸುಹಾಸ್‌ ಶೆಟ್ಟಿ ಕುಟುಂಬಕ್ಕೆ ಬಿಜೆಪಿಯಿಂದ 25 ಲಕ್ಷ ಪರಿಹಾರ: ವಿಜಯೇಂದ್ರ ಘೋಷಣೆ

ಸುಹಾಸ್ ಶೆಟ್ಟಿ ಅವರ ಹತ್ಯೆ ವಿಚಾರವಾಗಿ ಕೇಂದ್ರ ಗೃಹಸಚಿವರಾದ ಅಮಿತ್ ಶಾ ಅವರು ಮಧ್ಯಪ್ರವೇಶಿಸಿ, ಕೇವಲ ಅಪರಾಧಿಗಳು ಮಾತ್ರವಲ್ಲದೆ ಅವರಿಗೆ ಬೆಂಬಲ ನೀಡಿದ ಮತ್ತು ಹಣಕಾಸು ನೆರವು ನೀಡಿದ ಎಲ್ಲರನ್ನೂ ತ್ವರಿತವಾಗಿ ನ್ಯಾಯದ ಮುಂದೆ ತರಲು ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದ್ದಾರೆ.

Share This Article