ಚಂಡೀಗಢ: ಅಮರಿಂದರ್ ಸಿಂಗ್ ವಿರುದ್ಧ ಬಹಿರಂಗವಾಗಿ ಆಗಾಗ ಹೇಳಿಕೆಯಲ್ಲೇ ಸಿಕ್ಸರ್ ಸಿಡಿಸುತ್ತಿದ್ದ ಸಿಧು ಕೊನೆಗೂ ಅವರನ್ನು ಪಂಜಾಬ್ ಮುಖ್ಯಮಂತ್ರಿ ಪಟ್ಟದಿಂದ ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
2004ರಲ್ಲಿ ಬಿಜೆಪಿ ಸೇರಿದ್ದ ಸಿಧು ಲೋಕಸಭಾ ಚುನಾವಣೆಯಲ್ಲಿ ಅಮೃತಸರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. 2004, 2009 ರಲ್ಲಿ ಸಿಧು ಜಯಗಳಿಸಿದ್ದರೆ 2014ರ ಲೋಕಸಭಾ ಚುನಾವಣೆಯಲ್ಲಿ ಅರುಣ್ ಜೇಟ್ಲಿ ಅವರಿಗೆ ಅಮೃತಸರದ ಟಿಕೆಟ್ ನೀಡಲಾಗಿತ್ತು. ಇದರಿಂದ ಬಹಿರಂಗವಾಗಿ ಬಂಡಾಯ ಸಾರಿದ್ದ ಸಿಧು ಬಿಜೆಪಿಯನ್ನು ತೊರೆದು 2017ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
Advertisement
Advertisement
2017ರಲ್ಲಿ ಅಮೃತಸರ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯಗಳಿಸಿದ್ದ ಸಿಧು ಡಿಸಿಎಂ ಪಟ್ಟದ ಮೇಲೆ ಕಣ್ಣಿಟ್ಟಿದ್ದರು. ಆದರೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಿಧು ಆಸೆಗೆ ಕೊಕ್ಕೆ ಹಾಕಿದ್ದರು. ಆದರೂ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಇಷ್ಟ ಇಲ್ಲದೇ ಇದ್ದರೂ ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಇಲ್ಲಿಂದ ಸಿಧು ಮತ್ತು ಅಮರಿಂದರ್ ಮಧ್ಯೆ ಸಂಘರ್ಷದ ಕಿಡಿ ಹೊತ್ತಿಕೊಂಡಿತು.
Advertisement
2019ರ ಲೋಕಸಭೆ ಚುನಾವಣಾ ಸಮಯದಲ್ಲಿ ಸಿಧು ಪತ್ನಿ ನವಜೋತ್ ಕೌರ್ ಚಂಡೀಗಢ ಟಿಕೆಟ್ ಬಯಸಿದ್ದರು. ಟಿಕೆಟ್ ಸಿಗದಕ್ಕೆ ಅಮರಿಂದರ್ ಕಾರಣ ಎಂದು ಆರೋಪಿಸುವುದರೊಂದಿಗೆ ಸಂಘರ್ಷ ಮತ್ತಷ್ಟು ಜಾಸ್ತಿಯಾಯಿತು. 2019ರ ಜುಲೈನಲ್ಲಿ ಸಿಧು ಮಂತ್ರಿ ಸ್ಥಾನಕ್ಕೂ ರಾಜೀನಾಮೆ ನೀಡಿದರು. ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್‍ನಲ್ಲಿ ಭಿನ್ನಮತ – ಸತ್ಯಕ್ಕೆ ಸೋಲಿಲ್ಲ ಎಂದ ನವಜೋತ್ ಸಿಂಗ್ ಸಿಧು
Advertisement
ರಾಜೀನಾಮೆ ಬಳಿಕವೂ ಪಂಜಾಬ್ ಸರ್ಕಾರ, ಅಮರಿಂದರ್ ವಿರುದ್ಧ ಸಿಧು ಟೀಕೆ ಮುಂದುವರಿಸಿದರು. ಈ ನಡುವೆ ಪಂಜಾಬ್‍ನಲ್ಲಿ ಆಪ್ ಬಲ ಜಾಸ್ತಿ ಆಗುತ್ತಿದ್ದು, ಸಿಧು ಆಪ್ ಸೇರುವ ಸಾಧ್ಯತೆಯಿದೆ ಎಂಬ ವದಂತಿಗಳು ಹರಿದಾಡತೊಡಗಿತು.
ಮುಂದಿನ ವಿಧಾಸಭಾ ಚುನಾವಣೆಯಲ್ಲಿ ನಾಯಕರೇ ಬಡಿದಾಡುವುದು ಬೇಡ ಎಂದು ತೀರ್ಮಾನಿಸಿ ಸಿಧು ಆಸೆಯಂತೆ ಅವರನ್ನು ಹೈಕಮಾಂಡ್ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ತನ್ನ ವಿರುದ್ಧವೇ ಬಂಡಾಯ ಸಾರಿದ್ದ ಸಿಧುವನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಅಮರಿಂದರ್ ಸಿಟ್ಟಾಗಿದ್ದರು. ಇದನ್ನೂ ಓದಿ: ಆಪ್ ಜೊತೆ ಕೈ ಜೋಡಿಸ್ತಾರಾ ಸಿಧು?
ಈ ನಡುವೆ ಸಿಧು ಸಲಹೆಗಾರರಾಗಿದ್ದ ಮಾಲ್ವಿಂದರ್ ಸಿಂಗ್ ಕಾಶ್ಮೀರ ವಿಚಾರವಾಗಿ ವಿವಾದಿತ ಹೇಳಿಕೆ ನೀಡಿದ್ದರು. ಇದರಿಂದ ಸಿಟ್ಟಾದ ಅಮರಿಂದರ್ ಅವರನ್ನು ವಜಾ ಮಾಡುವಲ್ಲಿ ಯಶಸ್ವಿಯಾಗಿದ್ದರು. ತನ್ನ ಆಪ್ತನನ್ನು ವಜಾ ಮಾಡಿದ ವಿಚಾರದಲ್ಲಿ ಸಿಟ್ಟಾಗಿದ್ದ ಸಿಧು ಅಮರಿಂದರ್ ಆಡಳಿತದ ವಿರುದ್ಧ ಹೈಕಮಾಂಡ್‍ಗೆ ದೂರು ನೀಡುತ್ತಲೇ ಇದ್ದರು.
ಪಂಜಾಬ್‍ನಲ್ಲಿ ಆಡಳಿತ ವಿರೋಧಿ ಅಲೆ ಇದೆ. ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಅಮರಿಂದರ್ ಸಿಂಗ್ ಅವರನ್ನು ಕೆಳಗಡೆ ಇಳಿಸಲೇ ಬೇಕು ಎಂದು ಸಿಧು ಬಣ ಹೈಕಮಾಂಡ್‍ಗೆ ದೂರು ನೀಡಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಂತರಿಕ ಸಮೀಕ್ಷೆಯನ್ನು ಮಾಡಿತ್ತು ಎನ್ನಲಾಗುತ್ತಿದೆ. ಕೊನೆಗೆ ಹಲವು ನಾಯಕರ ಅಪಸ್ವರಕ್ಕೆ ಮಣಿದ ಕಾಂಗ್ರೆಸ್ ಬಿಜೆಪಿಯಂತೆ ಅಮರಿಂದರ್ ಸಿಂಗ್ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿತ್ತು.
Submitted my resignation to Honble Governor. pic.twitter.com/sTH9Ojfvrh
— Capt.Amarinder Singh (@capt_amarinder) September 18, 2021
ಕಾಂಗ್ರೆಸ್ ಹೈಕಮಾಂಡ್ ಪರವಾಗಿ ಪ್ರಿಯಾಂಕಾ ಗಾಂಧಿ ಸಿಧು ಪರವಾಗಿದ್ದಾರೆ. ಆಡಳಿತ ವಿರೋಧಿ ಅಲೆ, ಈ ಹಿಂದೆ ಚುನಾವಣೆಯಲ್ಲಿ ನೀಡಿದ್ದ ಭರವಸೆ ಈಡೇರಿಸದ ಪರಿಣಾಮ ಹೈಕಮಾಂಡ್ ಮಟ್ಟದಲ್ಲಿ ಅಮರಿಂದರ್ ಪರ ಬ್ಯಾಟ್ ಮಾಡುವ ನಾಯಕರಿಲ್ಲ. ಹೀಗಾಗಿ ಕೊನೆಗೆ ಅಮರಿಂದರ್ ಮುಖ್ಯಮಂತ್ರಿ ಪಟ್ಟಕ್ಕೆ ರಾಜೀನಾಮೆ ನೀಡಿದ್ದಾರೆ.