ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿ ಹೊಡೆದ ಪರಿಣಾಮ ಒರ್ವ ಮೃತಪಟ್ಟು ಏಳು ಜನರು ಗಾಯಗೊಂಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಜಿಲ್ಲೆಯ ನಾಗಮಂಗಲ-ಪಾಂಡವಪುರ ತಾಲೂಕಿನ ಗಡಿ ಗ್ರಾಮಗಳಾದ ಖರಡ್ಯ-ಜಕ್ಕನಹಳ್ಳಿ ಬಳಿ ತಡರಾತ್ರಿ ಈ ಅಪಘಾತ ಸಂಭವಿಸಿದೆ. ಬೀದರ್ ಮೂಲದ ರಾಜೇಶ್(35) ಮೃತಪಟ್ಟ ವ್ಯಕ್ತಿ. ಘಟನೆಯಲ್ಲಿ ಕ್ಯಾಂಟರ್ ನಲ್ಲಿದ್ದ ಧರ್ಮವೀರ, ಮಧು, ಊರೀನ್, ರಾಜ್ ಕುಮಾರ್ ಎಂಬವರು ಸೇರಿದಂತೆ ಏಳು ಮಂದಿಗೆ ಗಾಯಗಳಾಗಿವೆ.
ಶುಕ್ರವಾರ ರಾತ್ರಿ ಮೈಸೂರಿನಿಂದ ಬೀದರ್ ಕಡೆ ಹೋಗುತ್ತಿದ್ದ ವೇಳೆ ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ಕ್ಯಾಂಟರ್ ಜಮೀನಿನೊಳಕ್ಕೆ ಎರಡು ಪಲ್ಟಿ ಹೊಡೆದಿದೆ. ಈ ಬಗ್ಗೆ ಬೇರೊಂದು ಲಾರಿ ಚಾಲಕ 108 ಆಂಬುಲೆನ್ಸ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಸ್ಥಳಕ್ಕೆ ಬಂದ ಆಂಬುಲೆನ್ಸ್ ಸಿಬ್ಬಂದಿ, ಎಲ್ಲರನ್ನು ಕರೆದುಕೊಂಡು ಹೋಗಿದ್ದಾರೆ. ಗಾಯಾಳು ಪೈಕಿ ಒರ್ವನನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಉಳಿದ ಗಾಯಾಳುಗಳು ಬಿ.ಜಿ ನಗರದ ಎಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.