ಬೆಳಗಾವಿ: ಕೇರಳ (Kerala) ಮಾದರಿಯಲ್ಲಿ ಗ್ರಾಮ ಪಂಚಾಯತಿ (Gram Panchayat) ಅಧ್ಯಕ್ಷರು, ಉಪಾಧ್ಯಕ್ಷರ ಗೌರವಧನ ಹೆಚ್ಚಳ ಮಾಡಲು ಸಾಧ್ಯವಿಲ್ಲ. ಆದರೆ ಗೌರವ ಧನ ಹೆಚ್ಚಳದ ಬಗ್ಗೆ ಸಿಎಂ ಸಿದ್ದರಾಮಯ್ಯ ಬಳಿಕ ಚರ್ಚೆ ಮಾಡೋದಾಗಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯರಾದ ಡಿ.ಎಸ್.ಅರುಣ್ ಹಾಗೂ ಡಾ.ಧನಂಜಯ ಸರ್ಜಿಯವರು, ಗ್ರಾಮ ಪಂಚಾಯತಿ ಸದಸ್ಯರು, ಅಧ್ಯಕ್ಷ, ಉಪಾಧ್ಯಕ್ಷ, ಸಿಬ್ಬಂದಿ, ವಾಟರ್ ಮನ್ ಗಳ ಗೌರವ ಧನ ಹೆಚ್ಚಳ ಮಾಡಬೇಕು. ಗ್ರಾಮ ಪಂಚಾಯತಿ ನೌಕರರ ಸಂಘದ ಬೇಡಿಕೆ ಈಡೇರಿಕೆ ಮಾಡಬೇಕು ಅಂತ ಒತ್ತಾಯಿಸಿದರು.
ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಉತ್ತರ ನೀಡಿ, ಅನೇಕ ಬೇಡಿಕೆಗಳಿಗಾಗಿ ಗ್ರಾಮ ಪಂಚಾಯತಿ ನೌಕರರ ಸಂಘದವರು ಪ್ರತಿಭಟನೆ ಮಾಡಿದ್ದರು. ಎಲ್ಲಾ ಅಸೋಸಿಯೇಷನ್‌ಗಳ ಜೊತೆ ನಾನು ಸಭೆ ಮಾಡಿದ್ದೇವೆ. ಸಮಸ್ಯೆಗಳ ಪರಿಹಾರಕ್ಕೆ ಇಲಾಖೆ ಕಮೀಷನರ್ ನೇತೃತ್ವದಲ್ಲಿ ಸಮಿತಿ ಮಾಡಲಾಗಿದೆ. ಆರ್ಥಿಕ ವಿಚಾರದ ಬೇಡಿಕೆ ಬಗ್ಗೆ ಅರ್ಥಿಕ ಇಲಾಖೆಗೆ ಕಡತ ಕಳಿಸಲಾಗಿದೆ ಎಂದರು.
ಗೌರವ ಧನ ಹೆಚ್ಚಳ ಬಗ್ಗೆ ಪ್ರಸ್ತಾಪ ಅಗಿದೆ. ಕೇರಳ ಮಾದರಿಯಲ್ಲಿ ವೇತನ ಜಾಸ್ತಿ ಮಾಡಿ ಎನ್ನುತಿದ್ದಾರೆ. ಕೇರಳದಲ್ಲಿ 900 ಪಂಚಾಯತಿಗಳು ಮಾತ್ರ ಇವೆ. ಕರ್ನಾಟಕದಲ್ಲಿ 6 ಸಾವಿರ ಪಂಚಾಯತಿಗಳು ಇವೆ. ಹೀಗಾಗಿ ಕೇರಳ ಮಾದರಿ ವೇತನ ಹೆಚ್ಚಳ ಸಾಧ್ಯವಿಲ್ಲ. ಆದರೂ ಪಂಚಾಯತಿ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರ ವೇತನ ಹೆಚ್ಚಳಕ್ಕೆ ಸಿಎಂಗೆ ಮನವಿ ಸಲ್ಲಿಕೆ ಮಾಡ್ತೀವಿ. ಇದನ್ನ ಹೊರೆತುಪಡಿಸಿ ಬೇರೆ ಬೇರೆ ಬಸ್ ಪಾಸ್, ಪಿಂಚಣಿ, ವಿಮೆ ಸೇರಿ ಹಲವು ಬೇಡಿಕೆ ಇಟ್ಟಿದ್ದಾರೆ. ನಾವು ಬೇಡಿಕೆಗಳ ಪರಿಹಾರಕ್ಕೆ 3 ತಿಂಗಳು ಸಮಯ ಕೇಳಿದ್ದೇವೆ. ಈಗ ಒಂದು ತಿಂಗಳು ಅಗಿದೆ. 2 ತಿಂಗಳ ಒಳಗೆ ಯಾವುದು ಸಾಧ್ಯವೋ ಆ ಬೇಡಿಕೆಗಳ ಬಗ್ಗೆ ತೀರ್ಮಾನ ಮಾಡ್ತೀವಿ ಎಂದಿದ್ದಾರೆ.