ನವದೆಹಲಿ: ಕೋರ್ಟ್‌ಗಳು ಸೂಪರ್ ಪಾರ್ಲಿಮೆಂಟ್ ಆಗಬಾರದು. ಈಗ ಕಾರ್ಯಾಂಗ ಮತ್ತು ಶಾಸಕಾಂಗದ ಜಾಗದಲ್ಲಿ ನ್ಯಾಯಾಂಗದ ಪ್ರವೇಶವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ (Vice President Jagdeep Dhankhar) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಪರಾಷ್ಟ್ರಪತಿಗಳ ಎನ್‌ಕ್ಲೇವ್‌ನಲ್ಲಿ ರಾಜ್ಯಸಭಾ ಇಂಟರ್ನ್‌ಗಳ ಆರನೇ ಬ್ಯಾಚ್ ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರಪತಿಗಳಿಗೆ (President) ಕೋರ್ಟ್ ನಿರ್ದೇಶನ ನೀಡಲು ಸಾಧ್ಯವಿಲ್ಲ. ಆದರೆ ಇತ್ತೀಚಿನ ತೀರ್ಪಿನ ಮೂಲಕ ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಲಾಗಿದೆ. ನಾವು ಎಲ್ಲಿಗೆ ಹೋಗುತ್ತಿದ್ದೇವೆ? ದೇಶದಲ್ಲಿ ಏನಾಗುತ್ತಿದೆ ಎಂದು ಧನಕರ್ ಕಳವಳ ವ್ಯಕ್ತಪಡಿಸಿದರು.
ನ್ಯಾಯಾಧೀಶರು ಭಾರತದ ರಾಷ್ಟ್ರಪತಿಗಳಿಗೆ ನಿರ್ದೇಶಿಸುವ ಪರಿಸ್ಥಿತಿಯನ್ನು ನಾವು ಹೊಂದಲು ಸಾಧ್ಯವಿಲ್ಲ. ಈ ರೀತಿಯ ನಿರ್ದೇಶನವು ರಾಷ್ಟ್ರದ ಅತ್ಯುನ್ನತ ಕಚೇರಿಯ ಸಾಂವಿಧಾನಿಕ ಅಧಿಕಾರವನ್ನು ದುರ್ಬಲಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: Waqf Act| ಹಿಂದೂಗಳು ಸಲ್ಲಿಸಿದಾಗ ಹೈಕೋರ್ಟ್‌ಗೆ ಹೋಗಿ ಎಂದಿತ್ತು – ಸುಪ್ರೀಂ ವಿಚಾರಣೆಗೆ ಮಾನದಂಡ ಏನು?- ವಕೀಲ ವಿಷ್ಣು ಶಂಕರ್ ಜೈನ್
#WATCH | Delhi | Vice-President Jagdeep Dhankhar says, “…We cannot have a situation where you direct the President of India and on what basis? The only right you have under the Constitution is to interpret the Constitution under Article 145(3). There, it has to be five judges… pic.twitter.com/U7N9Ve3FZx
— ANI (@ANI) April 17, 2025
ಸಂವಿಧಾನವು (Constitution) ನ್ಯಾಯಾಂಗಕ್ಕೆ ವಿಧಿ 145(3) ಅಡಿಯಲ್ಲಿ ಕಾನೂನನ್ನು ವ್ಯಾಖ್ಯಾನಿಸುವ ಅಧಿಕಾರವನ್ನು ನೀಡುತ್ತದೆ. ಸಂವಿಧಾನಿಕ ಪೀಠದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ನ್ಯಾಯಾಧೀಶರು ಇರಬೇಕಾಗುತ್ತದೆ. ಆದರೆ ನ್ಯಾಯಾಲಯಗಳು ರಾಷ್ಟ್ರಪತಿಗಳಿಗೆ ನಿರ್ದೇಶನಗಳನ್ನು ನೀಡಲು ಅಧಿಕಾರ ನೀಡುವುದಿಲ್ಲ ಎಂದು ಉಪರಾಷ್ಟ್ರಪತಿ ಹೇಳಿದರು.
ಮಸೂದೆಗಳ ಮೇಲಿನ ನಿರ್ಧಾರಗಳು ಆಳವಾದ ಚಿಂತನೆ ಮತ್ತು ಸಮಾಲೋಚನೆಯನ್ನು ಒಳಗೊಂಡಿರುತ್ತವೆ. ಇಂತಹ ವಿಷಯಗಳಲ್ಲಿ ಗಡುವು ವಿಧಿಸುವುದು ಸರಿಯಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ವಕ್ಫ್ ಮಂಡಳಿಗೆ ಸದಸ್ಯರ ನೇಮಕ ಮಾಡುವಂತಿಲ್ಲ, ಆಸ್ತಿಗಳ ವಿಚಾರದಲ್ಲೂ ಯಥಾಸ್ಥಿತಿ ಕಾಪಾಡಿ: ಸುಪ್ರೀಂ
ಏನಿದು ಕೇಸ್?
ಶಾಸನಸಭೆ ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕುವ ವಿಚಾರವಾಗಿ ರಾಷ್ಟ್ರಪತಿ ಹಾಗೂ ರಾಜ್ಯಪಾಲರ ಅಧಿಕಾರಕ್ಕೆ ಸುಪ್ರೀಂ ಕೋರ್ಟ್ (Suprme Court) ಡೆಡ್‌ಲೈನ್ ವಿಧಿಸಿ ತೀರ್ಪು ಪ್ರಕಟಿಸಿತ್ತು. ಪರಿಶೀಲನೆಗಾಗಿ ರಾಜ್ಯಪಾಲರಿಂದ ಬಂದ ಮಸೂದೆಗಳ ವಿಚಾರವಾಗಿ ಮೂರು ತಿಂಗಳ ಅವಧಿಯಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ರಾಷ್ಟ್ರಪತಿಯವರಿಗೆ ಸುಪ್ರೀಂ ಕೋರ್ಟ್ ಕಾಲಮಿತಿ ನಿಗದಿ ಮಾಡಿ ಏಪ್ರಿಲ್ 8 ರಂದು ಆದೇಶ ಪ್ರಕಟಿಸಿತ್ತು.
ರಾಜ್ಯಪಾಲರು ರಾಷ್ಟ್ರಪತಿಯವರ ಪರಿಶೀಲನೆಗಾಗಿ ಯಾವ ದಿನಾಂಕಕ್ಕೆ ಮಸೂದೆಯನ್ನು ಕಳುಹಿಸಲಾಗಿತ್ತೋ, ಆ ದಿನಾಂಕದಿಂದ ಅನ್ವಯವಾಗುವಂತೆ ಮೂರು ತಿಂಗಳ ಅವಧಿಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೋರ್ಟ್ ರಾಷ್ಟ್ರಪತಿಯವರಿಗೆ ಹೇಳಿರುವುದು ಇದೇ ಮೊದಲು. ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಮಹಾದೇವನ್ ಅವರನ್ನೊಳಗೊಂಡ ಪೀಠವು ತಮಿಳುನಾಡು ರಾಜ್ಯ ಸರ್ಕಾರ vs ರಾಜ್ಯಪಾಲ ರವಿ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿ ಈ ಮಹತ್ವದ ತೀರ್ಪು ಪ್ರಕಟಿಸಿತ್ತು.