ಹಾಸನ: ಪಿಡಿಒ (PDO) ಹುದ್ದೆಗೆ ನಡೆಯುತ್ತಿರುವ ಪರೀಕ್ಷೆಗೆ ತುಂಬು ತೋಳಿನ ಅಂಗಿ ತೊಟ್ಟು ಹಾಜರಾದ ಅಭ್ಯರ್ಥಿಗಳ ಅಂಗಿಯ ತೋಳುಗಳನ್ನು ಹಾಸನದ (Hassan) ಪರೀಕ್ಷಾ ಕೇಂದ್ರದ ಸಿಬ್ಬಂದಿ ಅರ್ಧ ತೋಳಿನವರೆಗೆ ಕತ್ತರಿಸಿದ್ದಾರೆ.
ನಗರದ ಎಲ್‍ವಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ನೂರಾರು ಯುವಕ-ಯುವತಿಯರು ಆಗಮಿಸಿದ್ದರು. ಕೆಲ ಯುವತಿಯರು ತುಂಬುತೋಳು ಬಟ್ಟೆ ಧರಿಸಿ ಬಂದಿದ್ದರು. ಇದರಿಂದ ಪರೀಕ್ಷಾ ಕೇಂದ್ರದೊಳಗೆ ಅಭ್ಯರ್ಥಿಗಳನ್ನು ಬಿಡಲು ಅಧಿಕಾರಿಗಳು ನಿರಾಕರಿಸಿದರು. ಪರೀಕ್ಷೆಗೆ ಸಮಯವಾಗುತ್ತಿದೆ ಒಳಗೆ ಬಿಡಿ ಎಂದು ಮನವಿ ಮಾಡಿದರು ಅವಕಾಶ ನೀಡಲಿಲ್ಲ.
ಕೊನೆಗೆ ಅರ್ಧ ತೋಳಿನವರೆಗೆ ಬಟ್ಟೆ ಕತ್ತರಿಸಿ ಪರೀಕ್ಷಾ ಕೇಂದ್ರದ ಒಳಗೆ ಬಿಡಲಾಯಿತು. ಈ ವೇಳೆ ಅಧಿಕಾರಿಗಳು ಹಾಗೂ ಪರೀಕ್ಷಾರ್ಥಿಗಳ ನಡುವೆ ವಾಗ್ವಾದ ನಡೆಯಿತು. ಈ ವೇಳೆ, ವಸ್ತ್ರಸಂಹಿತೆ ನಿಯಮವಿದೆ, ಹಾಲ್ ಟಿಕೆಟ್‍ನಲ್ಲಿ ನಿಯಮಗಳನ್ನು ಹಾಕಲಾಗಿದೆ. ಆದರೆ ನೀವು ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿ ಪರೀಕ್ಷೆ ಬರೆಯಲು ಬಂದಿದ್ದೀರಾ? ನಮ್ಮ ಕರ್ತವ್ಯ ನಾವು ಮಾಡಲೇಬೇಕು ಎಂದು ಅಧಿಕಾರಿ ಉತ್ತರ ನೀಡಿದ್ದಾರೆ.
ಕಡೆಗೆ ಕರ್ತವ್ಯನಿರತ ಸಿಬ್ಬಂದಿ ಕತ್ತರಿಯಿಂದ ಅರ್ಧತೋಳಿನವರೆಗೆ ಬಟ್ಟೆ ಕತ್ತರಿಸಿ ನಂತರ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಾರೆ.