ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ, ಏವೂರ ದೊಡ್ಡ ತಾಂಡದ ಜನರಿಗೆ ಕುಡಿಯುವ ನೀರು ವಿಷವಾಗಿ ಪರಿಣಮಿಸಿದೆ. ಈ ಗ್ರಾಮದ ನೀರು ಕುಡಿಯಲು ಯೋಗ್ಯವಲ್ಲ ಎಂದು ಸ್ವತಃ ಜಿಲ್ಲಾಡಳಿತವೇ ಒಪ್ಪಿಕೊಂಡಿದೆ.
ಏವೂರ ಗ್ರಾಮದ ಕುಡಿಯುವ ನೀರಿನಲ್ಲಿ ಕ್ಯಾನ್ಸರ್ ಕಾರಕ ಆರ್ಸೆನಿಕ್ ಪತ್ತೆಯಾಗಿದ್ದು, ಈ ಊರಿನ ಜನ ನಿತ್ಯ ಕುಡಿಯುವ ನೀರಿನ ಬದಲು ವಿಷ ಕುಡಿಯುತ್ತಿದ್ದಾರೆ. ಏವೂರ ತಾಂಡದ ನೀರು ಕುಡಿಯಲು ಯೋಗ್ಯವಲ್ಲ ಅಂತ ಸ್ವತಃ ಜಿಲ್ಲಾಡಳಿತ ಒಪ್ಪಿಕೊಂಡಿದೆ. ಆದರೆ ಕುಡಿಯುವ ನೀರನ್ನು ಸರಬರಾಜು ಮಾಡುವಲ್ಲಿ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದ್ದು, ಜನರ ಜೀವನದ ಜೊತೆ ಆಟವಾಡುತ್ತಿದೆ.
Advertisement
Advertisement
ಗ್ರಾಮದ ನೀರಿನಲ್ಲಿ ಕೇವಲ ಆರ್ಸೆನಿಕ್ ಮಾತ್ರವಲ್ಲದೆ, ಅತಿ ಹೆಚ್ಚು ಫ್ಲೋರೈಡ್, ಮತ್ತು ವಿವಿಧ ವಿಷಕಾರಿ ಅಂಶಗಳ ಮಿಶ್ರಣವಾಗಿದ್ದು, ನಿತ್ಯ ನೀರನ್ನು ಕುಡಿಯುವ ಊರಿನ ಜನರಲ್ಲಿ ಕ್ಯಾನ್ಸರ್ ಮಾತ್ರವಲ್ಲದೆ ಬುದ್ಧಿಮಾಂದ್ಯತೆ, ವಿಕಲಾಂಗ, ಮೂಳೆ ರೋಗ, ಚರ್ಮ ರೋಗಗಳು ತಾಂಡವಾಡುತ್ತಿದೆ. ಅಷ್ಟೇ ಅಲ್ಲದೆ ನೀರನ್ನು ಶುದ್ಧೀಕರಣ ಮಾಡಿದರೂ ಕೂಡ ವಿಷಕಾರಿ ಅಂಶ ಕಡಿಮೆ ಆಗುವುದಿಲ್ಲವಂತೆ. ಹೀಗಾಗಿ ಬೇರೆ ದಾರಿ ಇಲ್ಲದೆ ಏವೂರ ತಾಂಡದ ಜನ ಇದೇ ನೀರನ್ನು ಕುಡಿಯುತ್ತಿದ್ದಾರೆ.
Advertisement
Advertisement
ಇದರಿಂದ ಅಕ್ಕ-ಪಕ್ಕದ ಊರಿನವರು ಈ ತಾಂಡವನ್ನು ರೋಗಸ್ತ ತಾಂಡ ಎಂದು ಕರೆಯುವಂತಾಗಿದೆ. ಇಷ್ಟೇ ಅಲ್ಲದೇ ಈ ಊರಿನ ಹೆಣ್ಣು ಮಕ್ಕಳನ್ನು ಮದುವೆ ಆಗಲು ಸಹ ಯಾರು ಮುಂದಾಗುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ಈ ಊರಿನ ಜನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಈ ಬಗ್ಗೆ 2018ರಲ್ಲಿ ನ್ಯಾಷನಲ್ ಸೇವಾ ಡಾಕ್ಟರ್ ಅಸೋಸಿಯೇಷನ್ ಮತ್ತು ತಾಂಡ ಅಭಿವೃದ್ಧಿ ನಿಗಮ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ, ಏವೂರು ತಾಂಡದ ಜನ ನಿತ್ಯ ಕಣ್ಣಿನೀರಿನಲ್ಲಿ ಕೈತೊಳೆಯುವಂತಾಗಿದೆ.