ನ್ಯೂಯಾರ್ಕ್: ಆಸ್ಟ್ರಿಯನ್-ಕೆನಡಾದ ಬಿಲಿಯನೇರ್ ಉದ್ಯಮಿ ಮತ್ತು ರಾಜಕಾರಣಿ ಫ್ರಾಂಕ್ ಸ್ಟ್ರೋನಾಚ್ (Canadian auto parts billionaire Frank Stronach) ಅವರನ್ನು ದಶಕಗಳ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಬಂಧಿಸಿ, ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
91 ವರ್ಷದ ಸ್ಟ್ರೋನಾಚ್ ವಿರುದ್ಧ ಅತ್ಯಾಚಾರ, ಮಹಿಳೆಯ ಮೇಲೆ ಅಸಭ್ಯವಾಗಿ ಹಲ್ಲೆ, ಲೈಂಗಿಕ ದೌರ್ಜನ್ಯ ಮತ್ತು ಬಲವಂತವಾಗಿ ಕೂಡಿಹಾಕಿರುವುದು ಸೇರಿದಂತೆ ಐದು ಅಪರಾಧಗಳ ಆರೋಪ ಹೊರಿಸಲಾಗಿದೆ ಎಂದು ಪೀಲ್ ಪ್ರಾದೇಶಿಕ ಪೊಲೀಸರು ತಿಳಿಸಿದ್ದಾರೆ.
ಸದ್ಯ ಅವರನ್ನು ಷರತ್ತುಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಒಂಟಾರಿಯೊದ ಬ್ರಾಂಪ್ಟನ್‌ನಲ್ಲಿರುವ ಒಂಟಾರಿಯೊ ಕೋರ್ಟ್ ಆಫ್ ಜಸ್ಟಿಸ್‌ಗೆ ಹಾಜರಾಗಲಿದ್ದಾರೆ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.
ಪೀಲ್ ಪ್ರಾದೇಶಿಕ ಪೊಲೀಸ್ ಕಾನ್ಸ್‌ಟೇಬಲ್ ಟೈಲರ್ ಬೆಲ್, ಈ ಪ್ರಕರಣದಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಆರೋಪಿಗಳು ಇದ್ದಾರೆ ಎಂದಿರುವ ಅವರು ಆದರೆ ಎಷ್ಟು ಮಂದಿ ಎಂದು ಹೇಳಲು ನಿರಾಕರಿಸಿದರು. ಅಲ್ಲದೇ ಇದೊಂದು ಉನ್ನತ ಮಟ್ಟದ ಪ್ರಕರಣವಾಗಿದೆ. ನಮ್ಮ ವಿಶೇಷ ಸಂತ್ರಸ್ತರ ಘಟಕವು ಸಂತ್ರಸ್ತರನ್ನು ರಕ್ಷಿಸಲು ಬದ್ಧವಾಗಿದೆ. ಜೊತೆಗೆ ಒಂದಕ್ಕಿಂತ ಹೆಚ್ಚು ಸಂತ್ರಸ್ಥರಿದ್ದಾರೆ. ಆದರೆ ನಾವು ಇನ್ನೂ ಆ ಸಂಖ್ಯೆಯನ್ನು ಖಚಿತಪಡಿಸುವುದಿಲ್ಲ ಎಂದು ಹೇಳಿದ್ದಾರೆ.
1980 ರಿಂದ 2023 ರವರೆಗೆ ಲೈಂಗಿಕ ದೌರ್ಜನ್ಯಗಳು ನಡೆದಿವೆ ಎಂದು ಪೊಲೀಸರು ಆರೋಪಿಸಿದ್ದಾರೆ. ಈ ಸಂಬಂಧ ಜನರು ಮಾಹಿತಿ ಹೊಂದಿದ್ದರೆ ಅಥವಾ ಅವರೂ ಸಂತ್ರಸ್ತರಾಗಿದ್ದರೆ ದೂರು ಸಲ್ಲಿಸುವಂತೆ ಮನವಿ ಮಾಡಲಾಗುತ್ತಿದೆ ಎಂದು ಬೆಲ್ ತಿಳಿಸಿದ್ದಾರೆ.