ಒಟ್ಟಾವಾ: ಕೆನಡಾದಲ್ಲಿ 2018ರಲ್ಲಿ ಅಪಘಾತವೆಸಗಿ ಜೂನಿಯರ್ ಹಾಕಿ ತಂಡದ 16 ಸದಸ್ಯರ ಸಾವಿಗೆ ಕಾರಣವಾದ ಭಾರತ (India) ಮೂಲದ ಟ್ರಕ್ ಚಾಲಕನನ್ನು ಕೆನಡಾದಿಂದ (Canada) ಗಡಿಪಾರು ಮಾಡಲು ಆದೇಶಿಸಿಸಲಾಗಿದೆ.
ಟ್ರಕ್ ಡ್ರೈವರ್ ಜಸ್ಕಿರತ್ ಸಿಂಗ್ ಸಿಧು (Jaskirat Singh Sidhu), ಅಜಾಗರೂಕತೆಯಿಂದ ಟ್ರಕ್ ಚಲಾಯಿಸಿ ಸಾಸ್ಕಾಚೆವಾನ್ ಪ್ರಾಂತ್ಯದ ಟಿಸ್‍ಡೇಲ್ ಬಳಿ ಹಂಬೋಲ್ಟ್ ಬ್ರಾಂಕೋಸ್ ಜೂನಿಯರ್ ಹಾಕಿ ತಂಡದ ಬಸ್ ಅಪಘಾತಕ್ಕೆ ಕಾರಣವಾಗಿದ್ದ. ಮಾರ್ಗದಲ್ಲಿ ಸ್ಟಾಪ್ ಸಿಗ್ನಲ್ ತೋರಿಸಿದರೂ ಜಸ್ಕಿರತ್ ಸಿಂಗ್ ಸಿಧು ಅದನ್ನು ಲೆಕ್ಕಿಸದೆ ಟ್ರಕ್ ಚಲಾಯಿಸಿದ ಪರಿಣಾಮ ಈ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ 16 ಜನ ಹಾಕಿ ಆಟಗಾರರು ಸಾವಿಗೀಡಾಗಿದ್ದರು. ಅಲ್ಲದೇ 13 ಜನ ಗಾಯಗೊಂಡಿದ್ದರು. ಇದನ್ನೂ ಓದಿ: ವರ್ಷದ ಹಿಂದೆ ಮೋದಿ ತಂಗಿದ್ದ ಮೈಸೂರು ಹೋಟೆಲ್ ಬಿಲ್ 80 ಲಕ್ಷ ಬಾಕಿ!
ಈ ಪ್ರಕರಣದ ವಿಚಾರಣೆಯನ್ನು ಕ್ಯಾಲ್ಗರಿಯ ವಲಸೆ ಮತ್ತು ನಿರಾಶ್ರಿತರ ಮಂಡಳಿ ನಡೆಸಿದ್ದು ಗಡಿಪಾರು ನಿರ್ಧಾರ ಪ್ರಕಟಿಸಿದೆ. ಸಿಧು ಕೆನಡಾದ ಪ್ರಜೆಯಲ್ಲ ಮತ್ತು ಆತ ಗಂಭೀರ ಅಪರಾಧ ಎಸಗಿದ್ದಾನೆ ಎಂಬುದಕ್ಕೆ ಪುರಾವೆಗಳಿವೆ. ಅಲ್ಲದೇ ಮೃತಪಟ್ಟವರ ಕುಟುಂಬದವರು ಸಿಧು ಗಡಿಪಾರಿಗೆ ಒತ್ತಾಯಿಸಿದ್ದಾರೆ. ಇದೇ ಕಾರಣಕ್ಕೆ ಗಡಿಪಾರಿನ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಈ ಪ್ರಕರಣದಲ್ಲಿ ಇನ್ನೂ ಹಲವಾರು ಕಾನೂನು ಪ್ರಕ್ರಿಯೆಗಳು ಬರಲಿವೆ. ಗಡಿಪಾರು ಪ್ರಕ್ರಿಯೆಯು ತಿಂಗಳುಗಳು ಅಥವಾ ವರ್ಷಗಳನ್ನು ತೆಗೆದುಕೊಳ್ಳಬಹುದು ಎಂದು ಸಿಧು ಪರ ವಕೀಲರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಪಾಯಕಾರಿ ಚಾಲನೆಗಾಗಿ ಸಿಧು ಈಗಾಗಲೇ 8 ವರ್ಷಗಳ ಶಿಕ್ಷೆಯನ್ನು ಅನುಭವಿಸಿದ್ದಾನೆ. ಬಳಿಕ ಆತನಿಗೆ ಪೆರೋಲ್ ನೀಡಲಾಗಿತ್ತು. ಇದನ್ನೂ ಓದಿ: ಚನ್ನಗಿರಿ ಪ್ರಕರಣ ಲಾಕಪ್ ಡೆತ್ ಅಲ್ಲ, ಆತನಿಗೆ ಮೂರ್ಛೆ ರೋಗ ಇತ್ತು: ಸಿದ್ದರಾಮಯ್ಯ