ಉಗ್ರ ಸ್ವರೂಪ ಪಡೆದ ಟ್ರಕ್ ಚಾಲಕರ ಪ್ರತಿಭಟನೆ – ಕೆನಡಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಒಟ್ಟಾವಾ: ಲಸಿಕೆ ಆದೇಶಗಳು ಸೇರಿದಂತೆ ಕೋವಿಡ್ ಸಂಬಂಧಿತ ಕ್ರಮಗಳ ವಿರುದ್ಧ ನಡೆಯುತ್ತಿರುವ ಟ್ರಕ್ ಚಾಲಕ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರಡೊ, ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ನಾವು ಕಾನೂನು ಬಾಹಿರ ಮತ್ತು ಅಪಾಯಕಾರಿ ಚಟುವಟಿಕೆಗಳನ್ನು ತಡೆಗಟ್ಟುತ್ತೇವೆ. ಇಂತಹ ಚಟುವಟಿಕೆಗಳಿಗೆ ಅನುಮತಿ ನೀಡುವುದಿಲ್ಲ ಎಂದು ರಾಜಧಾನಿಯಲ್ಲಿ ತಿಳಿಸಿದ್ದಾರೆ. ತಕ್ಷಣದಿಂದಲೇ ತುರ್ತು ಪರಿಸ್ಥಿತಿ ಆದೇಶ ಜಾರಿಗೆ ಬಂದಿದ್ದು, 30 ದಿನಗಳವರೆಗೆ ಇರಲಿದೆ. ಇದನ್ನೂ ಓದಿ: ಲಸಿಕೆ ಕಡ್ಡಾಯ ನಿಯಮ ವಿರೋಧಿಸಿ ತೀವ್ರ ಪ್ರತಿಭಟನೆ – ರಹಸ್ಯ ಸ್ಥಳಕ್ಕೆ ಕೆನಡಾ ಪಿಎಂ ಸ್ಥಳಾಂತರ
ಪ್ರತಿಭಟನಾಕಾರರ ಕೂಟಗಳನ್ನು ಚದುರಿಸಲು ಕಾನೂನು ಜಾರಿಗಾಗಿ ಕ್ರಮ ವಹಿಸಲಾಗುವುದು. ಪ್ರತಿಭಟನಾನಿರತ ವ್ಯಕ್ತಿಗಳು ಮತ್ತು ಸಂಸ್ಥೆಗಳ ಖಾತೆಗಳನ್ನು ಬಂದ್ ಮಾಡಲು ಹಣಕಾಸು ಸಂಸ್ಥೆಗಳಿಗೆ ತಿಳಿಸಲಾಗಿದೆ. ಪ್ರತಿಭಟನಾಕಾರರ ಪ್ರತಿನಿಧಿಗಳೊಂದಿಗೆ ಚರ್ಚಿಸಲು ಪ್ರಧಾಣಿ ನಿರಾಕರಿಸಿದ್ದಾರೆ.
ಕೆನಡಾ ಮತ್ತು ಯುಎಸ್ ಅನ್ನು ಸಂಪರ್ಕಿಸುವ ಒಂಟಾರಿಯೊದ ವಿಂಡ್ಸರ್ ಮತ್ತು ಮಿಚಿಗನ್‌ನ ಡೆಟ್ರಾಯಿಟ್ ನಡುವಿನ ರಾಯಭಾರಿ ಸೇತುವೆಯನ್ನು ಪ್ರತಿಭಟನಾಕಾರರಿಂದ ಪೊಲೀಸರು ತೆರವುಗೊಳಿಸಿದ್ದಾರೆ. ಇದಾದ ಬಳಿಕ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇದನ್ನೂ ಓದಿ: ಭಾರತ ವಿರೋಧಿ ಸ್ನೇಹಿತರು ಟ್ರುಡೊರನ್ನು ರಕ್ಷಿಸಬಹುದು: ಇದು ಕರ್ಮ ಎಂದ ಸಿಂಘ್ವಿ
ಜನವರಿ ಮಧ್ಯ ಭಾಗದಲ್ಲಿ ಗಡಿಯಾಚೆಗಿನ ಟ್ರಕ್ ಚಾಲಕರಿಗೆ ಎರಡು ಡೋಸ್ ಲಸಿಕೆ ಕಡ್ಡಾಯಗೊಳಿಸಿದ ಕೆನಡಾ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಕೆನಡಾ ಪ್ರಧಾನಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದರು. ಆದರೆ ಆದೇಶವನ್ನು ಹಿಂತೆಗೆದುಕೊಳ್ಳುವ ಯಾವುದೇ ಕ್ರಮಕೈಗೊಂಡಿಲ್ಲ.