– ಭಾರತಕ್ಕೆ ಮೋಸ್ಟ್ ವಾಂಟೆಡ್ ಆಗಿದ್ದ ಹರ್ದೀಪ್ ಸಿಂಗ್ ನಿಜ್ಜರ್
ಒಟ್ಟಾವಾ: ಕಳೆದ ವರ್ಷ ಕೆನಡಾದಲ್ಲಿ ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ಕೆಲವರನ್ನು ಕೆನಡಾ ಪೊಲೀಸರು (Canada Police) ಬಂಧಿಸಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಹತ್ಯೆಗೆ ಸಂಬಂಧಿಸಿದಂತೆ ಹಿಟ್ ಸ್ಕ್ವಾಡ್‌ನ ಸದಸ್ಯರನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ. ತನಿಖಾಧಿಕಾರಿಗಳು ಹಲವು ತಿಂಗಳ ಹಿಂದೆಯೇ ಕೆನಡಾದಲ್ಲಿ ಶಂಕಿತ ಉಗ್ರರನ್ನು ಗುರುತಿಸಿದ್ದರು, ಆತನಿಗಾಗಿ ಹದ್ದಿನ ಕಣ್ಣಿಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೈದ ತಂಡದಲ್ಲಿದ್ದ ಕೆಲ ಆರೋಪಿಗಳನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಆದ್ರೆ ಬಂಧಿತರ ಹಿನ್ನೆಲೆಯನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಕೊಂದವರು ಯಾರು? ಅವರು ಭಾರತದ ಮೂಲದವರಾ? ಅವರು ನೀಡಿದ ಮಾಹಿತಿ ಏನು? ಎಂಬ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.
ಕಳೆದ ವರ್ಷ ಜೂನ್ 18ರಂದು ಕೆನಡಾದಲ್ಲಿ ಖಲಿಸ್ತಾನಿ ಉಗ್ರ (Khalistani Terrorist) ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೀಡಾಗಿದ್ದನು. ಇದರ ಹಿಂದೆ ಭಾರತದ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪ ಕೂಡ ಮಾಡಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಶುರುವಾಗಿತ್ತು.
ಭಾರತಕ್ಕೆ ಬೇಕಿದ್ದ ಮೋಸ್ಟ್ ವಾಂಟೆಡ್:
ಈ ಹಿಂದೆ ಭಾರತ ಸರ್ಕಾರ ಬಿಡುಗಡೆ ಮಾಡಿದ 40 ಉಗ್ರರ ಪಟ್ಟಿಯಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಪ್ರಮುಖ ಉಗ್ರನಾಗಿದ್ದ. 2022 ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಪಂಜಾಬ್‌ನ ಜಲಂಧರ್‌ನಲ್ಲಿ ಹಿಂದೂ ಅರ್ಚಕನನ್ನು ಕೊಲ್ಲಲು ಸಂಚು ರೂಪಿಸಿದ್ದ ಆರೋಪದ ಮೇಲೆ ಬಂಧಿಸಲು ಸಕಲ ಪ್ರಯತ್ನ ನಡೆದಿತ್ತು. ಆದ್ರೆ ಆರೋಪಿ ಎಸ್ಕೇಪ್ ಆಗಿದ್ದರಿಂದ ನಿಜ್ಜರ್ ಬಗ್ಗೆ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿತ್ತು. ಅಲ್ಲದೇ ಭಾರತದ ವಿರುದ್ಧ ಭಯೋತ್ಪಾದಕ ಕೃತ್ಯಗಳನ್ನ ಎಸಗಿದ್ದ ಪ್ರಕರಣದಲ್ಲಿ ನಿಜ್ಜರ್ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್ ಕೂಡ ಸಲ್ಲಿಸಿತ್ತು. ಈ ವೇಳೆ ಭಾರತದಿಂದ ಪರಾರಿಯಾಗಿದ್ದ ನಿಜ್ಜರ್ ಕೆನಡಾದಲ್ಲಿ ನೆಲೆಸಿದ್ದ, ಖಲಿಸ್ತಾನಿ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥನೂ ಆಗಿದ್ದ ಎಂದು ಮೂಲಗಳಿಂದ ತಿಳಿದುಬಂದಿತ್ತು.