ಒಟ್ಟಾವ: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ (Hardeep Singh Nijjar Murder Case) ಬಂಧಿತರಾಗಿರುವ ಭಾರತ ಮೂಲದ ಮೂವರು ಆರೋಪಿಗಳ ಫೋಟೋಗಳನ್ನು ಕೆನಡಾ ಪೊಲೀಸರು ಶನಿವಾರ ಹಂಚಿಕೊಂಡಿದ್ದಾರೆ.
ಈ ಕುರಿತಂತೆ ಕೆನಡಿಯನ್ ಮೌಂಟೆಡ್ ಪೊಲೀಸ್ (Canadian Police) ಅಧಿಕಾರಿಗಳ ತಂಡ ಪತ್ರಿಕಾ ಹೇಳಿಕೆಯನ್ನೂ ಬಿಡುಗಡೆ ಮಾಡಿದೆ. ಆಲ್ಬರ್ಟಾದ ಎಡ್ಮಂಟಡ್ ನಗರದಲ್ಲಿ ಮೂವರನ್ನು ಬಂಧಿಸಲಾಗಿದ್ದು, ಅವರನ್ನು ಕರಣ್ ಪ್ರೀತ್ ಸಿಂಗ್ (28), ಕಮಲ್ ಪ್ರೀತ್ ಸಿಂಗ್ (22) ಹಾಗೂ ಕರಣ್ ಬ್ರಾರ್ (22) ಎಂದು ಗುರುತಿಸಲಾಗಿದೆ. ಈ ಮೂವರು ಭಾರತ ಮೂಲದವರಾಗಿದ್ದಾರೆ ಎಂದು ತಿಳಿಸಿದೆ. ಅಲ್ಲದೇ , ಕೊಲೆ ಸಮಯದಲ್ಲಿ ಆರೋಪಿಗಳು ಬಳಸಿದ್ದಾರೆ ಎನ್ನಲಾದ ಕಾರಿನ ಚಿತ್ರವನ್ನೂ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿರುವ ಕೆನಡಾ ಪೊಲೀಸ್ ಅಧಿಕಾರಿ, ನಿಜ್ಜರ್ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ, ಸಾಕ್ಷ್ಯದ ರೂಪದ ಬಗ್ಗೆ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಹತ್ಯೆಯ ಹಿಂದಿನ ಕಾರಣ ತನಿಖೆ ನಂತರ ತಿಳಿಯಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯಶ್ ನಟನೆಯ ಟಾಕ್ಸಿಕ್ : ಕರೀನಾ ಜಾಗಕ್ಕೆ ಬಂದ ಲೇಡಿ ಸೂಪರ್ ಸ್ಟಾರ್
ಏನಿದು ಕೇಸ್?
ಕಳೆದ ವರ್ಷ ಜೂನ್ 18ರಂದು ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೀಡಾಗಿದ್ದನು. ಇದರ ಹಿಂದೆ ಭಾರತದ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪ ಕೂಡ ಮಾಡಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಶುರುವಾಗಿತ್ತು. ಇದನ್ನೂ ಓದಿ: ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆ ಕೇಸ್ – ಹಿಟ್ ಸ್ಕ್ವಾಡ್‌ನ ಪ್ರಮುಖ ಆರೋಪಿ ಅರೆಸ್ಟ್!
ಭಾರತದಿಂದ ಪರಾರಿಯಾಗಿದ್ದ ಮೋಸ್ಟ್ ವಾಂಟೆಡ್:
ಈ ಹಿಂದೆ ಭಾರತ ಸರ್ಕಾರ ಬಿಡುಗಡೆ ಮಾಡಿದ 40 ಉಗ್ರರ ಪಟ್ಟಿಯಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಪ್ರಮುಖ ಉಗ್ರನಾಗಿದ್ದ. 2022 ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಪಂಜಾಬ್‌ನ ಜಲಂಧರ್‌ನಲ್ಲಿ ಹಿಂದೂ ಅರ್ಚಕನನ್ನು ಕೊಲ್ಲಲು ಸಂಚು ರೂಪಿಸಿದ್ದ ಆರೋಪದ ಮೇಲೆ ಬಂಧಿಸಲು ಸಕಲ ಪ್ರಯತ್ನ ನಡೆದಿತ್ತು. ಆದ್ರೆ ಆರೋಪಿ ಎಸ್ಕೇಪ್ ಆಗಿದ್ದರಿಂದ ನಿಜ್ಜರ್ ಬಗ್ಗೆ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿತ್ತು. ಅಲ್ಲದೇ ಭಾರತದ ವಿರುದ್ಧ ಭಯೋತ್ಪಾದಕ ಕೃತ್ಯಗಳನ್ನ ಎಸಗಿದ್ದ ಪ್ರಕರಣದಲ್ಲಿ ನಿಜ್ಜರ್ ವಿರುದ್ಧ ಎನ್‌ಐಎ ಚಾರ್ಜ್ಶೀಟ್ ಕೂಡ ಸಲ್ಲಿಸಿತ್ತು. ಈ ವೇಳೆ ಭಾರತದಿಂದ ಪರಾರಿಯಾಗಿದ್ದ ನಿಜ್ಜರ್ ಕೆನಡಾದಲ್ಲಿ ನೆಲೆಸಿದ್ದ, ಖಲಿಸ್ತಾನಿ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥನೂ ಆಗಿದ್ದ ಎಂದು ಮೂಲಗಳಿಂದ ತಿಳಿದುಬಂದಿತ್ತು.